ಕೇರಳ ರಾಜ್ಯದ ಹೆಸರನ್ನು ಬದಲಾವಣೆ ಮಾಡಲು ಕೇರಳ ವಿಧಾನಸಭೆ ಸರ್ವಾನುಮತದಿಂದ ನಿರ್ಣಯ ಅಂಗೀಕಾರ ಮಾಡಿದ್ದು, ಇನ್ನುಮುಂದೆ ಕೇರಳ ಹೆಸರು ‘ಕೇರಳಂ’ ಎಂದು ಬದಲಾಗಲಿದೆ. ರಾಜ್ಯದ ಹೆಸರನ್ನು ‘ಕೇರಳ’ದಿಂದ ‘ಕೇರಳಂ’ ಎಂದು ಅಧಿಕೃತವಾಗಿ ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ರಾಜ್ಯ ವಿಧಾನಸಭೆ ಬುಧವಾರ ಅವಿರೋಧವಾಗಿ ಅಂಗೀಕರಿಸಲಾಗಿದೆ.
ಕೇರಳ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳವನ್ನು ಕೇರಳಂ ಆಗಿ ಬದಲಾಯಿಸುವ ಪ್ರಸ್ತಾವವನ್ನು ಮಂಡಿಸಿದರು. ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಕೂಡಲೇ ಹೊಸ ಹೆಸರಿಗೆ ಅಧಿಕೃತ ಅನುಮೋದನೆ ನೀಡಬೇಕು ಎಂದು ಆಗ್ರಹಿಸಲಾಯಿತು. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳೂ ಮುಖ್ಯಮಂತ್ರಿ ಅವರ ಈ ಪ್ರಸ್ತಾವಕ್ಕೆ ಬಹುಮತದ ಬೆಂಬಲ ನೀಡಿದರು.
ಮಲಯಾಳಂನಲ್ಲಿ ನಮ್ಮ ರಾಜ್ಯದ ಹೆಸರು ‘ಕೇರಳಂ.’ ರಾಜ್ಯಗಳನ್ನು ಭಾಷಾವಾರು ಆಧಾರದ ಮೇಲೆ 1956ರ ನವೆಂಬರ್ 1ರಂದು ಮರುಸಂಘಟಿಸಲಾಯಿತು. ನವೆಂಬರ್ 1ರಂದು ‘ಕೇರಳಪ್ಪಿರವಿ’ ದಿನವನ್ನೂ ಆಚರಿಸಲಾಗುತ್ತದೆ. ಮಲಯಾಳಂ ಮಾತನಾಡುವ ಜನರಿಗೆ ಅಖಂಡ ಕೇರಳದ ಬೇಡಿಕೆ ಸ್ವಾತಂತ್ರ್ಯ ಹೋರಾಟದ ದಿನಗಳಿಂದಲೂ ಅವರ ಮಾತೃಭಾಷೆ ಪ್ರಬಲವಾಗಿತ್ತು. ಆದಾಗ್ಯೂ, ಸಂವಿಧಾನದ ಮೊದಲ ಶೆಡ್ಯೂಲ್ ರಾಜ್ಯದ ಹೆಸರನ್ನು ‘ಕೇರಳ’ ಎಂದು ನಿರ್ಧರಿಸಿದೆ. ಸಂವಿಧಾನದ 3 ನೇ ಪರಿಚ್ಛೇದದ ಅಡಿಯಲ್ಲಿ ಅದನ್ನು ‘ಕೇರಳಂ’ ಎಂದು ತಿದ್ದುಪಡಿ ಮಾಡಲು ತುರ್ತು ಕ್ರಮಗಳ ಅಗತ್ಯವಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಆರ್ಟಿಕಲ್ 3 ಹೊಸ ರಾಜ್ಯಗಳ ರಚನೆ ಮತ್ತು ಪ್ರದೇಶಗಳು, ಗಡಿಗಳು ಅಥವಾ ಅಸ್ತಿತ್ವದಲ್ಲಿರುವ ರಾಜ್ಯಗಳ ಹೆಸರುಗಳ ಬದಲಾವಣೆಯೊಂದಿಗೆ ವ್ಯವಹರಿಸುತ್ತದೆ. ಎಂಟನೇ ಶೆಡ್ಯೂಲ್ನಲ್ಲಿ ಸೇರಿಸಲಾದ ಎಲ್ಲಾ ಭಾಷೆಗಳಲ್ಲಿ ‘ಕೇರಳಂ’ ಎಂದು ಬಳಕೆಯನ್ನು ಬದಲಾಯಿಸುವಂತೆ ನಿರ್ಣಯವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಹೆಸರು ಬದಲಾವಣೆ ಮಾಡಿಕೊಂಡ ರಾಜ್ಯಗಳು:
ರಾಜ್ಯದ ಹೆಸರು ಬದಲಾವಣೆಯಾಗುತ್ತಿರುವುದು ಇದೇ ಮೊದಲಲ್ಲ ಈ ಹಿಂದೆ ಕೂಡಾ ಹಲವು ರಾಜ್ಯಗಳು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದವು. ಮದ್ರಾಸ್ ಪ್ರೆಸಿಡೆನ್ಸಿ ನಂತರ ಚೆನ್ನೈ ಎಂದು ಬದಲಾವಣೆ ಮಾಡಲಾಗಿದೆ. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಗಿದೆ. ಮಧ್ಯ ಭಾರತವನ್ನು ನಂತರ ಮಧ್ಯಪ್ರದೇಶ ಎಂದು ಕರೆಯಲಾಗುತ್ತಿದೆ. ಉತ್ತರಾಂಚಲ ರಾಜ್ಯವನ್ನು ಈಗ ಉತ್ತರಾಖಂಡ ಎಂದು ಕರೆಯಲಾಗಿದೆ. ಒರಿಸ್ಸಾ ರಾಜ್ಯದ ಹೆಸರು ಒಡಿಶಾ ಎಂದು ಬದಲಾಗಿದೆ. ಈಶಾನ್ಯ ಫ್ರಾಂಟಿಯರ್ ಏಜೆನ್ಸಿ ಅರುಣಾಚಲ ಪ್ರದೇಶ ಆಗಿ ಬದಲಾವಣೆಯಾಗಿದೆ.