ಸಮಾಜದಲ್ಲಿ ಬಡವ ಶ್ರೀಮಂತ ಜಾತಿ ಮತ ಪಂಥಗಳನ್ನು ಹಾಗೂ ಭಾಷೆಯ ಎಲ್ಲೆಯನ್ನು ಪಕ್ಕಕ್ಕೆ ಸರಿಸಿ ಎಲ್ಲರನ್ನೂ ಒಂದು ಮಾಡುವ ಸಾಮರ್ಥ್ಯ ಯಾರಿಗಾದರೂ ಇದ್ದರೆ ಅದು ಕಲೆಗೆ ಮಾತ್ರ. ಅಂತಹ ಕಲೆಯನ್ನೇ ಮುಖ್ಯ ಅಸ್ತ್ರವನ್ನಾಗಿಟ್ಟುಕೊಂಡು ನಗರವನ್ನು ಸುಂದರವಾಗುವಂತೆ ಮತ್ತು ಅನೌಪಚಾರಿಕ ಕಾರ್ಯವನ್ನು ಮಾಡುತ್ತಿರುವ ಮಹಿಳೆಯರಿಗೂ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಡುವಂತಹ ಒಂದು ವೇದಿಕೆಯನ್ನು ನಿರ್ಮಾಣ ಮಾಡುವಂತಹ ಕಾರ್ಯವು ಬೆಂಗಳೂರು ನಗರದ ಮಾರತ್ ಹಳ್ಳಿ ಕೊಳಚೆ ನಿಗಮದ ಕ್ವಾರ್ಟರ್ಸ್ನಲ್ಲಿ ವಾಸಿಸುವ ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ ಎನ್ ಜಿ ಒ ಹೆಸರೇ ‘ಅಲ್ಲಿ ಸೇರೋಣ’ ಇಂಗ್ಲಿಷಿನಲ್ಲಿ ಹೇಳುವುದಾದರೆ ‘ಲೆಟ್ಸ್ ಮೀಟ್ ದೇರ್’ ಎಂದು. ಈ ಸಾಮಾಜಿಕ ಪ್ರಭಾವಿ ಆಂದೋಲನದ ಮುಖ್ಯ ಗುರಿ ಎಂದರೆ ಬಡವರು-ಶ್ರೀಮಂತರ ನಡುವಿನ ಅಂತರವನ್ನು ನಿವಾರಿಸುವುದೇ ಈ ಸಂಸ್ಥೆ ಪ್ರಮುಖ ಗುರಿಯಾಗಿದೆ.
ಬೆಂಗಳೂರಿನಂತಹ ಜನ ಜಂಗುಳಿಯಿಂದ ಕೂಡಿದ ನಗರದಲ್ಲಿ ಅವಕಾಶಗಳಿಂದ ವಂಚಿತರಾದ ಅನೇಕ ಮಹಿಳೆಯರು ಮತ್ತು ತಮ್ಮ ಆಸೆಗಳನ್ನು ಬದಿಗಿಟ್ಟು ಹೊಟ್ಟೆ ಪಾಡಿಗಾಗಿ ಯಾವುದೋ ಒಂದು ರೀತಿಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿರುತ್ತಾರೆ. ಅಂತಹ ಮಹಿಳೆಯರಿಗೆ ಸ್ವಾಭಿಮಾನವನ್ನು ತುಂಬಿ ಸ್ವಾವಲಂಬನೆ ಹಾಗೂ ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಅಲ್ಲಿ ಸೇರೋಣ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
ಅಲ್ಲಿ ಸೇರೋಣ ತಂಡ ಕರ್ನಾಟಕ ಸ್ಲಂ ಡೆವಲಪ್ಮೆಂಟ್ ಬೋರ್ಡ್ ಅಡಿಯಲ್ಲಿ ಬರುವ ಮಾರತಹಳ್ಳಿಯ ಸ್ಲಂ ಬೋರ್ಡ್ ಕ್ವಾರ್ಟರ್ಸ್ಗೆ ಬಂದಾಗ ಅಲ್ಲಿ ವಿವಿಧ ಸಂಸ್ಕೃತಿಗಳು, ಭೌಗೋಳಿಕತೆ ಮತ್ತು ಭಾಷೆಯ ಜನರನ್ನು ಕಂಡುಕೊಂಡರು, ಅವರಲ್ಲಿ ಹೆಚ್ಚಿನವರು ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುವವರು. ಮಹಿಳೆಯರನ್ನು ಒಂದೆಡೆ ಸೇರಿಸಿ ಅವರಲ್ಲಿನ ಕಲೆಯನ್ನು ಗುರುತಿಸಿ ಅವರಲ್ಲಿ ಚೈತನ್ಯವನ್ನು ತುಂಬಿ ಅವರಿಗೆ ಆರ್ಥಿಕ ಸ್ವಾವಲಂಬನೆಯ ದಾರಿಯನ್ನು ಅಲ್ಲಿ ಸೇರೋಣ ತಂಡ ಕೆಲಸ ಮಾಡುತ್ತದೆ. ಕಳೆದ ಎಂಟು ತಿಂಗಳುಗಳಲ್ಲಿ, ಮಾರತಹಳ್ಳಿಯ ಸ್ಲಂ ಬೋರ್ಡ್ ಕ್ವಾರ್ಟರ್ಸ್ನ ಮಹಿಳೆಯರು ತೊಡಗಿಸಿಕೊಂಡಿದ್ದಾರೆ, ವಾರಕ್ಕೊಮ್ಮೆ ಕನಿಷ್ಠ ಎರಡು ಗಂಟೆಗಳ ಕಾಲ ಸಭೆ ಸೇರುತ್ತಾರೆ, ಅಲ್ಲಿ ಅವರು ತಮ್ಮ ಕಲೆಯನ್ನು ತೋರ್ಪಡಿಸಿಕೊಳ್ಳುತ್ತಾರೆ. ತಮ್ಮ ಕಷ್ಟ-ಸುಖಗಳನ್ನು ಹೇಳಿಕೊಳ್ಳುತ್ತಾರೆ. ರಂಗೋಲಿಗಳನ್ನು ಬಿಡಿಸುತ್ತಾರೆ, ಬಟ್ಟೆ, ದಿಂಬು, ಬೆಡ್ ಶೀಟ್ ಗಳನ್ನು ಹೊಲಿಯುವುದು, ಗೋಡೆಗಳ ಮೇಲೆ ಚಿತ್ರ ಬಿಡುಸುವ ಕೆಲಸ ಮಾಡುತ್ತಾರೆ. ಇದು ಈ ಸಮುದಾಯವನ್ನು ಮುಖ್ಯ ನೆಲೆಯ ಹತ್ತಿರಕ್ಕೆ ತಂದಿದೆ ಇದರಿಂದಾಗಿ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ.
ನಾವು ಕಲೆಯ ಮೂಲಕ ಮಹಿಳೆಯರನ್ನು ಹತ್ತಿರ ತಂದು ಕಲೆ ಅಭ್ಯಾಸಗಳು ಮತ್ತು ಸಂಸ್ಕೃತಿ ಮೂಲಕ ಅವರ ಜೀವನಕ್ಕೆ ಹತ್ತಿರವಾಗಲು ನೋಡುತ್ತಿದ್ದೇವೆ. ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿದ್ದೇವೆ ಮತ್ತು ಈ ಸಂಸ್ಥೆ ಅಭಿಯಾನ ಮೂಲಕ 600 ಕ್ಕೂ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಿದೆ. ನಗರದ ಆರ್ಥಿಕ ಸ್ಥಿತಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತಿದ್ದೇವೆ ಎಂದು . ಆಲ್ಲಿ ಸೆರೋಣ ತಂಡದ ಮುಖ್ಯಸ್ಥರಾದ ತನಿಶಾ ಅರೋರಾ ತಿಳಿಸಿದ್ದಾರೆ.
ಮಹಿಳೆಯರು ಒಟ್ಟಾಗಿ ತಮ್ಮ ಜೀವನವನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಗೋಡೆಗಳ ಮೇಲೆ ಪ್ರತಿನಿಧಿಸುತ್ತಿದ್ದಾರೆ. ಇದರಿಂದಾಗಿ ಕೊಳಗೇರಿಯ ಕಟ್ಟಡಗಳ ಗೋಡೆಗಳಲ್ಲಿ ಇಂದು ಸುಂದರವಾದ ಕಲಾಕೃತಿಗಳು ಮತ್ತು ಭಿತ್ತಿಚಿತ್ರಗಳಿಂದ ಕಂಗೊಳಿಸುತ್ತಿವೆ.ಈ ಹಿಂದೆ ಕಸದಿಂದ ತುಂಬಿದ್ದ ಪ್ರದೇಶಗಳು ಇಂದು ಸುಂದರವಾಗಿ ಕಣ್ಣಿಗೆ ಆನಂದವನನ್ನು ನೀಡುತ್ತಿವೆ. ಸಾರ್ವಜನಿಕ ಸಾರಿಗೆ ಈ ಪ್ರದೇಶದಲ್ಲಿ ನಿಲ್ಲಲು ಇದರಿಂದ ಸಹಾಯವಾಗಿದೆ ಎಂದು ಇಲ್ಲಿನ ನಿವಾಸಿ ಚಾಂದ್ ಹೇಳುತ್ತಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಸೇರೋಣ ತಂಡದಿಂದ ಇಲ್ಲಿನ ನಿವಾಸಿಗಳ ಸಾಮಾಜಿಕ, ಆರ್ಥಿಕ, ಆರೋಗ್ಯದಲ್ಲಿ ಸುಧಾರಣೆಯಾಗಿದೆ ಮತ್ತು ಜೀವನಶೈಲಿಯು ಬದಲಾಗಿದೆ.