ಇಸ್ರೋದ ಮಹಾತ್ವಾಕಾಂಕ್ಷೆಯ ಚಂದ್ರಯಾನ-3 ನೌಕೆ ಆಂಧ್ರದ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಮಧ್ಯಾಹ್ನ 2.35ಕ್ಕೆ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಉಡಾವಣೆ ಮಾಡಲಾಗಿದೆ.
ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಉಪಗ್ರಹವನ್ನು ಚಂದ್ರನ ಮೇಲ್ಮೈಯಲ್ಲಿ ಸುಲಭವಾಗಿ ಇಳಿಸುವ 6 ವಾರಗಳ ಮಿಷನ್ ಗೆ ಅಧಿಕೃತ ಚಾಲನೆ ಸಿಕ್ಕಿದೆ.
ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಮಾರ್ಕ್-3 ಹೆವಿ-ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನ ಲ್ಯಾಂಡರ್ ವಿಕ್ರಮ್ ಅನ್ನು ಕೂರಿಸಲಾಗಿದೆ. ಗಗನನೌಕೆಯು ಭೂಮಿಯಿಂದ ಚಂದ್ರನೆಡೆಗೆ ತಲುಪಲು ಸುಮಾರು 40 ದಿನ ತೆಗೆದುಕೊಳ್ಳುತ್ತದೆ. ಆಗಸ್ಟ್ 23 ರಂದು ಚಂದ್ರನಲ್ಲಿ ಇಳಿಯಲಿದೆ ಎಂದು ನಿರೀಕ್ಷಿಸಲಾಗಿದೆ. ಲ್ಯಾಂಡಿಂಗ್ ನಂತರ ಇದು ಒಂದು ಚಂದ್ರನ ದಿನಕ್ಕೆ ಕಾರ್ಯನಿರ್ವಹಿಸುತ್ತದೆ. ಅಂದರೆ ಸರಿಸುಮಾರು 14 ಭೂಮಿಯ ದಿನಗಳು. ಚಂದ್ರನ ಮೇಲಿನ ಒಂದು ದಿನವು ಭೂಮಿಯ ಮೇಲಿನ 14 ದಿನಗಳಿಗೆ ಸಮಾನವಾಗಿರುತ್ತದೆ.
ಈ ಯೋಜನೆ ಯಶಸ್ವಿಯಾದರೆ ಭಾರತದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಲಿದೆ. ಈವರೆಗೆ ಅಮೆರಿಕ, ಚೀನಾ ಮತ್ತು ರಷ್ಯಾ ಚಂದ್ರನ ಮೇಲೆ ಯಶಸ್ವಿಯಾಗಿ ಉಪಗ್ರಹವನ್ನು ಲ್ಯಾಂಡ್ ಮಾಡಿವೆ. ಇಂತಹ ಸಾಧನೆ ಮಾಡಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ.
ಚಂದ್ರಯಾನದ ಜೊತೆಗೆ ಪುಸ್ತಕವೂ ಲಾಂಚ್:
ಚಂದ್ರಯಾನ ಗಗನ ನೌಕೆ ಉಡಾವಣೆಗೆ ಮೊದಲೇ ವಿಜ್ಞಾನಕ್ಕೆ ಸಂಬಂಧಿಸಿದಂತೆ 50 ಲೇಖನಗಳ ‘ಪ್ರಿಸಮ್: ದಿ ಆನ್ಸೆಸ್ಟ್ರಾಲ್ ಅಬೋಡ್ ಆಫ್ ರೈನ್ಬೋ’ ಬುಕ್ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಲ್ಲಿ ಬಿಡುಗಡೆಯಾಗಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ಮಾಪಕ ಹಾಗೂ ಬರಹಗಾರ ವಿನೋದ್ ಮನಕರ್ ಬರೆದಿರುವ ಪುಸ್ತಕ, ಚಂದ್ರಯಾನ-3ರ ಲಾಂಚ್ ಪ್ಯಾಡ್ ಬಳಿ ರಿಲೀಸ್ ಆಗಿದೆ. ಈ ಮೂಲಕ ಮತ್ತೊಂದು ವಿಶೇಷ ಕ್ಷಣಕ್ಕೆ ಚಂದ್ರಯಾನ-3 ಲಾಂಚ್ ಪ್ಯಾಡ್ ಸಾಕ್ಷಿಯಾಗಿತ್ತು.