ಓಂ ರಾವತ್ ನಿರ್ದೇಶನ ಆದಿಪುರುಷ್ ಸಿನಿಮಾ ಟ್ರೇಲರ್ ಬಿಡುಗಡೆಯಾದಗಿನಿಂದಲೂ ಹಲವಾರು ಟೀಕೆಗಳು ಕೇಳಿಬಂದಿತ್ತು. ಇನ್ನು ಸಿನಿಮಾ ಬಿಡುಗಡೆಯಾದ ದಿನದಿಂದಲೂ ಡೈಲಾಗ್ಸ್, ತಿರುಚಿದ ಚಿತ್ರಕತೆ ಮತ್ತು ಕಳಪೆ ಗ್ರಾಫಿಕ್ಸ್ ಕಾರಣದಿಂದಾಗಿ ಈ ಸಿನಿಮಾ ವಿವಾದಗಳನ್ನು ತನ್ನ ಮೈಮೇಲೆ ಎಳೆದುಕೊಂಡಿತ್ತು. ಆದಿಪುರುಷ್ ಸಿನಿಮಾ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ ಎಂದು ಹಲವರು ಆರೋಪಿಸಿದ್ದು ಸಿನಿಮಾದ ವಿರುದ್ಧ ಹಲವು ದೂರುಗಳು ದಾಖಲಾಗಿವೆ. ಅದರಲ್ಲಿಯೂ ಸಿನಿಮಾದ ಕೆಲವು ಸಂಭಾಷಣೆಗಳ ವಿರುದ್ಧ ತೀವ್ರ ಆಕ್ಷೇಪ ಸಹ ವ್ಯಕ್ತವಾಗಿದೆ. . ಇಷ್ಟೇಲ್ಲ ಆದರೂ ಕೂಡಾ ಸಿನಿಮಾ ಸಂಭಾಷಣೆಕಾರ ಮನೋಜ್ ಮಾತ್ರ ತಪ್ಪೊಪ್ಪಿಕೊಂಡಿರಲಿಲ್ಲ. ಇದೀಗ ಆದಿಪುರುಷ್ ಸಿನಿಮಾದ ಸಂಭಾಷಣೆಕಾರ ಮನೋಜ್ ಮುಂತಶೀರ್ ಶುಕ್ಲಾ ತಡವಾಗಿ ಕ್ಷಮೆಯಾಚನೆಯನ್ನು ಮಾಡಿದ್ದಾರೆ.
“ಆದಿಪುರುಷನಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಜೋಡಿಸಿದ ಕೈಗಳಿಂದ, ನಾನು ನನ್ನ ಬೇಷರತ್ ಕ್ಷಮೆಯಾಚಿಸುತ್ತೇನೆ. ಪ್ರಭು ಭಜರಂಗ ಬಲಿ ನಮ್ಮನ್ನು ಒಗ್ಗೂಡಿಸಲಿ ಮತ್ತು ನಮ್ಮ ಪವಿತ್ರ ಸನಾತನ ಮತ್ತು ನಮ್ಮ ಮಹಾನ್ ರಾಷ್ಟ್ರದ ಸೇವೆ ಮಾಡಲು ನಮಗೆ ಶಕ್ತಿಯನ್ನು ನೀಡಲಿ” ಎಂದು ಮನೋಜ್ ಮುಂತಶೀರ್ ಶುಕ್ಲಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮನೋಜ್ ಮುಂತಶೀರ್ ಶುಕ್ಲಾ ಆದಿಪುರುಷ್ ಸಿನಿಮಾಕ್ಕೆ ಸಂಭಾಷಣೆ ಬರೆದಿರುವ ಜೊತೆಗೆ ಕೆಲವು ಹಾಡುಗಳಿಗೆ ಸಾಹಿತ್ಯವನ್ನೂ ಬರೆದಿದ್ದರು. ಸಿನಿಮಾದಲ್ಲಿ ಹನುಮಂತ ಆಡುವ ಸಂಭಾಷಣೆ, ರಾವಣ ಆಡುವ ಸಂಭಾಷಣೆಗಳ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಗ್ರಾಂಥಿಕವಲ್ಲದ ಠಪೋರಿ ಭಾಷೆಯನ್ನು ಹನುಮಂತ ಪಾತ್ರಧಾರಿಯಿಂದ ಆಡಿಸಲಾಗಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ರಾವಣನ ಪಾತ್ರಧಾರಿಯ ಕೆಲವು ಸಂಭಾಷಣೆಗಳ ಬಗ್ಗೆ ಹಾಗೂ ಮೇಘನಾಥನ ಕೆಲವು ಸಂಭಾಷಣೆಗಳ ಬಗ್ಗೆಯೂ ಇದೇ ಅಭಿಪ್ರಾಯ ವ್ಯಕ್ತವಾಗಿತ್ತು.
ಇನ್ನು ಮನೋಜ್ ಮುಂತಶೀರ್ ಅವರು, ಸಂದರ್ಶನವೊಂದರಲ್ಲಿ ತಾವು ಬರೆದಿರುವ ಸಂಭಾಷಣೆಗಳನ್ನು ಬಹಳ ಸುಲಭವಾಗಿ ಸಮರ್ಥಿಸಿಕೊಂಡಿದ್ದರು. ಅವರ ಪ್ರಕಾರ ಹನುಮಂತ ದೇವರಲ್ಲ, ಬದಲಿಗೆ ಅವನೊಬ್ಬ ಭಕ್ತ ಅಷ್ಟೇ. ಆತನ ಭಕ್ತಿಯಲ್ಲಿ ಆ ಶಕ್ತಿ ಇದ್ದುದರಿಂದಲೇ ಆತನನ್ನು ದೇವರನ್ನಾಗಿ ಮಾಡಿದ್ದೇವೆ ಎಂದಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಅವರಿಗೆ ಕೊಲೆ ಬೆದರಿಕೆ ಕೂಡ ಬಂದಿತ್ತು. ಹಿನ್ನೆಲೆಯಲ್ಲಿ ಮನೋಜ್ ಮುಂತಶೀರ್ ಅವರು ಭದ್ರತೆಗಾಗಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದು, ಮುಂಬೈ ಪೊಲೀಸರು ಭದ್ರತೆ ನೀಡಿದ್ದಾರೆ.
ಮನೋಜ್ ಅವರು ಕ್ಷಮೆಯಾಚಿದ್ದನ್ನು ನೆಟ್ಟಿಗರು ಒಪ್ಪಿಕೊಂಡಿಲ್ಲ. ಈಗಲೂ ಅವರ ವಿರುದ್ಧ ತೀವ್ರವಾಗಿ ಕಿಡಿಕಾರುತ್ತಿದ್ದಾರೆ.ಸಿನಿಮಾ ಬಿಡುಗಡೆಯಾಗಿ ಅದರ ಪ್ರಭಾವ ಕಡಿಮೆಯಾದ ಬಳಿಕ ಕ್ಷಮೆಯಾಚಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಮಂದಿಯ ಭಾವನೆಗಳಿಗೆ ನೋವಾಗಿದೆ ಎಂದು ನೆಟ್ಟಿಗರು ಅಕ್ರೋಶ ವ್ಯಕ್ತಪಡಿಸಿದ್ದಾರೆ.