ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ. ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾ ಅಭಿಮಾನಿಗಳು ನಿರೀಕ್ಷೆಗೂ ಮೀರಿದನ್ನು ಸಾಧಿಸಿ ತೋರಿಸಿದ ಛಲದಂಕಮಲ್ಲ. ಕಪಿಲ್ ದೇವ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಂತರ ಭಾರತ ಕ್ರಿಕೆಟ್ ಅನ್ನು ಉತ್ತುಂಗಕ್ಕೆ ಕೊಂಡೊಯ್ದ ಈ ಕ್ಯಾಪ್ಟನ್ ಕೂಲ್ ಒಬ್ಬ ಸಾವಯವ ಕೃಷಿಕ ಅನ್ನೊ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ.
ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ನಂತರ, ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಧೋನಿ ರಾಂಚಿಯ ನಾಗ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸೆಂಬೋ ಗ್ರಾಮದಲ್ಲಿ 43 ಎಕರೆ ಪ್ರದೇಶದಲ್ಲಿ ಈಜಾ ಫಾರ್ಮ್ ಎಂಬ ಹೆಸರಿನಲ್ಲಿ ಸಾವಯವ ಕೃಷಿಯನ್ನು ಪ್ರಾರಂಭಿಸಿದ್ದಾರೆ. ಸ್ಟ್ರಾಬೆರಿ, ಕ್ಯಾಪ್ಸಿಕಂ, ಡ್ರ್ಯಾಗನ್ ಫ್ರೂಟ್, ಕಲ್ಲಂಗಡಿ, ಸೋರೆಕಾಯಿ, ಬೆಂಡೆಕಾಯಿ, ಬ್ರೊಕೊಲಿ, ಟೊಮೇಟೊ ಸೇರಿದಂತೆ ಹಲವು ಬಗೆಯ ತರಕಾರಿಗಳನ್ನು ಧೋನಿ ಅವರ ಜಮೀನಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಗೂ ಸಾವಯವ ಪದ್ಧತಿಯಲ್ಲಿ ಬೆಳೆಯಲಾಗುತ್ತಿದೆ.
ಕೋಳಿ ಸಾಕಾಣಿಕೆ ಮಾಡುತ್ತಿರುವ ಎಂ ಎಸ್ ಧೋನಿ:
ಧೋನಿ ಫಾರ್ಮ್ನಲ್ಲಿ ಸಾವಯವ ಕೃಷಿಯೊಂದಿಗೆ ಕಡಕ್ನಾಥ್ ಜಾತಿಯ ಕೋಳಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಕಲಾಗುತ್ತಿದೆ. ಕಡಕ್ನಾಥ್ ಕೋಳಿಯ ಹೊರತಾಗಿ, ಧೋನಿ ಅವರ ಫಾರ್ಮ್ನಿಂದ ಮೊಟ್ಟೆಗಳು ಸಹ ದೊಡ್ಡ ಪ್ರಮಾಣದಲ್ಲಿ ಪೂರೈಕೆಯಾಗುತ್ತವೆ. ಈಜಾ ಫಾರ್ಮ್ನ ವಾಟ್ಸಾಪ್ ಗ್ರೂಪ್ ನಂಬರ್ನಲ್ಲಿ ಆರ್ಡರ್ ಮಾಡಿದರೆ, ಮೊಟ್ಟೆಗಳನ್ನು ಸುಲಭವಾಗಿ ಮನೆಗೆ ಪೂರೈಸಲಾಗುತ್ತದೆ. ಇದರೊಂದಿಗೆ ಈಜಾ ಫಾರ್ಮ್ನ ಔಟ್ಲೆಟ್ನಲ್ಲಿಯೂ ಮಾರಾಟ ಮಾಡಲಾಗುತ್ತದೆ.
ಹೈನುಗಾರಿಕೆಯಲ್ಲಿ ತೊಡಗಿರುವ ಧೋನಿ:
ಕೋಳಿ ಜೊತೆಗೆ ಭಾರತೀಯ ತಳಿಯ ದೇಸಿಗಿರ್ ಹಸು, ಸೆಹ್ವಾಲ್ ಮತ್ತು ಫ್ರೈಸೆನ್ ತಳಿಯ ಸುಮಾರು 300 ಹಸುಗಳನ್ನು ಧೋನಿ ಅವರ ಫಾರ್ಮ್ನಲ್ಲಿ ಸಾಕಲಾಗಿದ್ದು, ಈಜಾ ಫಾರ್ಮ್ನ ವಾಟ್ಸಾಪ್ ಗ್ರೂಪ್ನಲ್ಲಿ ಆರ್ಡರ್ ಮಾಡುವ ಮೂಲಕ ಅಥವಾ ಈಜಾ ಫಾರ್ಮ್ನ ಅಂಗಡಿಯಲ್ಲಿ ಸುಲಭವಾಗಿ ಹಾಲನ್ನು ಖರೀದಿಸಬಹುದು. ಇದರೊಂದಿಗೆ ಅಂಗಡಿಯಿಂದ ಮನೆಗೆ ಹಾಲು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಇನ್ನು ತರಕಾರಿ, ಹಣ್ಣು, ಕೋಳಿ ಸಾಕಿರುವ ಧೋನಿ ಈಗ ತಮ್ಮ ಜಮೀನಿನಲ್ಲಿ ಮೀನುಗಳನ್ನು ಸಾಕುತ್ತಿದ್ದಾರೆ. ಮೀನು ಸಾಕಣೆಗಾಗಿಯೇ ಎರಡು ದೊಡ್ಡ ಕೊಳಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ರೆಹು, ಕಾಟ್ಲಾ ಮತ್ತು ಟೆಲ್ಪಿಯಾ ಎಂಬ ಜಾತಿಯ ಮೀನುಗಳನ್ನು ಸಾಕಲಾಗುತ್ತಿದೆ.
ಧೋನಿ ಫಾರ್ಮ್ನ ತರಕಾರಿಗಳು ಮತ್ತು ಹಣ್ಣುಗಳನ್ನು ವಾಟ್ಸಪ್ನಲ್ಲಿ ಆರ್ಡರ್ ಮಾಡಬಹುದು:
ಧೋನಿಯ ಫಾರ್ಮ್ನಲ್ಲಿ ಬೆಳೆದ ತರಕಾರಿಗಳು ಮತ್ತು ಹಣ್ಣುಗಳನ್ನು ಈಜಾ ಫಾರ್ಮ್ ಹೆಸರಿನ ವಾಟ್ಸಾಪ್ ಗುಂಪಿನಲ್ಲಿ ಆರ್ಡರ್ ಮಾಡುವ ಮೂಲಕ ಅಥವಾ ಈಜಾ ಫಾರ್ಮ್ ಹೆಸರಿನ ಔಟ್ಲೆಟ್ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಖರೀದಿಸಬಹುದು. ರಾಜಧಾನಿ ರಾಂಚಿಯ ಲಾಲ್ಪುರದಲ್ಲಿರುವ ಸುಜಾತಾ ಚೌಕ್ ಮತ್ತು ಈಜಾ ಫಾರ್ಮ್ನ ಮಳಿಗೆಗಳ ಜೊತೆಗೆ, ಡೈಲಿ ಮಾರ್ಕೆಟ್ನಲ್ಲಿರುವ ಅಂಗಡಿಯಿಂದ ಹಣ್ಣುಗಳು ಮತ್ತು ತರಕಾರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರೊಂದಿಗೆ ಆಲ್ ಸೀಸನ್ ಫಾರ್ಮ್ ಫ್ರೆಶ್ ಏಜೆನ್ಸಿ ಮೂಲಕ ಧೋನಿ ಅವರ ಫಾರ್ಮ್ನಲ್ಲಿ ಬೆಳೆದ ಹಣ್ಣುಗಳು ಮತ್ತು ತರಕಾರಿಗಳನ್ನು ದುಬೈ ಮತ್ತು ಇತರ ಗಲ್ಫ್ ದೇಶಗಳಿಗೆ ಕಳುಹಿಸಲಾಗುತ್ತದೆ.