ಚಿತ್ರದುರ್ಗದ ಮುರುಘಾಶ್ರೀ ಪ್ರಕರಣ ಬಯಲು ಮಾಡಿದ್ದ ಮೈಸೂರಿನ ಒಡನಾಡಿ ಸಂಸ್ಥೆ ಇದೀಗ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಹೋರಾಟಕ್ಕೆ ಮುಂದಾಗಿದೆ. ಸೌಜನ್ಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಕುಟುಂಬಕ್ಕೆ ನ್ಯಾಯಕೊಡಿಸಲು ಒಡನಾಡಿ ಸಂಸ್ಥೆ ಹೋರಾಟಕ್ಕೆ ಇಳಿದಿದ್ದು ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿದೆ.
ನಿನ್ನೆ ಸೌಜನ್ಯ ಪರ ಹೋರಾಟಗಾರರನ್ನ ಭೇಟಿಯಾದ ಒಡನಾಡಿಯ ಮುಖಂಡರು. ಸೌಜನ್ಯ ಪರವಾದ ನ್ಯಾಯದ ಹೋರಾಟಕ್ಕೆ ಒಡನಾಡಿ ಬೆಂಬಲಿಸುತ್ತದೆ. ನ್ಯಾಯ ಸಿಗುವವರೆಗೂ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಒಡನಾಡಿ ಸಂಸ್ಥೆ ಹೇಳಿದೆ.
ಇತ್ತೀಚಿಗೆ ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಎಂದು ಬಿಂಬಿತವಾಗಿ ಕಳೆದ 11 ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಾ ಬಿದ್ದಿದ್ದ ಸಂತೋಷ್ ರಾವ್ ಎಂಬ ಅಮಾಯಕನನ್ನು ಕೋರ್ಟ್ ನಿರಪರಾಧಿ ಎಂದು ಘೋಷಿಸಿ ಬಿಡುಗಡೆ ಮಾಡಿತ್ತು. ಅಂದಿನಿಂದ ನಿಜವಾದ ಅಪರಾಧಿಗಳು ಯಾರು ಎನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿ ಉದ್ಭವವಾಗಿದೆ. ರಾಜ್ಯದಲ್ಲಿ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ.
ಸೌಜನ್ಯಗೆ ನ್ಯಾಯ ಕೊಡಿಸುವ ಪಣತೊಟ್ಟ ಒಡನಾಡಿ ಸಂಸ್ಥೆ:
ಸೌಜನ್ಯ ಪರ ಹೋರಾಟಗಾರರನ್ನು ಭೇಟಿ ಮಾಡಿದ ಬಳಿಕ ಮಾತನಾಡಿರುವ ಒಡನಾಡಿಯ ಸ್ಥಾಪಕ ಕಾರ್ಯದರ್ಶಿ ಸ್ಟಾನ್ಲಿ, ಧರ್ಮಸ್ಥಳ ಕ್ಷೇತ್ರದಲ್ಲಿ ನಡೆದ ಸೌಜನ್ಯ ಪ್ರಕರಣ ತಲೆ ತಗ್ಗಿಸುವಂತಹ ಘಟನೆ. ಅತ್ಯಾಚಾರ ಮಾಡಿದ ಪಾಪಿಗಳನ್ನ ಇನ್ನೂ ನ್ಯಾಯದ ಕಟ ಕಟೆಗೆ ತರಲಾಗಿಲ್ಲ. ದೇಶದ ಕಾನೂನಿಗೆ ಇದು ಸಾಧ್ಯವಾಗಿಲ್ಲ ಎಂಬುವುದು ನಗೆ ಪಾಟಿಲಿನ ಸಂಗತಿ. ಸಿಬಿಐ ಘನತೆಯನ್ನ ಉಳ್ಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೆ ಮರುತನಿಖೆಯಾಗಬೇಕು. ನಾವು ಈ ಹೋರಾಟದಲ್ಲಿ ಕೈ ಜೋಡಿಸುತ್ತಿದ್ದೇವೆ ಎಂದಿದ್ದಾರೆ.
ಯಾರು ಸೌಜನ್ಯಳನ್ನ ಅತ್ಯಾಚಾರ ಮಾಡಿದ್ರು ಎಂಬುವುದೇ ನಮ್ಮ ಹುಡುಕಾಟ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಇದರ ಬಗ್ಗೆ ಹೆಚ್ಚು ಮಾತನಾಡಬೇಕು. ಸಾಮಾಜಿಕ ಜವಾಬ್ದಾರಿ ಅನುಶಾಸನ ಬದ್ಧವಾದ ಹೊಣೆಗಾರಿಕೆ ಹೊತ್ತವರು. ತಮ್ಮ ಮನೆ ಬಾಗಿಲಲ್ಲಿರುವಂತಹ ತಮ್ಮ ಮನೆಯ ಮಗುವಿನ ಮೇಲಾಗಿರುವ ಅತ್ಯಾಚಾರ. ಆ ಮಗುವಿಗೆ ಸಂಬಂಧ ಪಟ್ಟವರಿಗೆ ಸಾಂತ್ವನ ಹೇಳುವುದು ಅವರ ಕರ್ತವ್ಯವಾಗಿದೆ. ಆ ಮಗುವಿಗೋಸ್ಕರ ನಾನು ಇದ್ದೇನೆ ಎನ್ನೋದು ಹೆಗ್ಗಡೆ ಅವರ ಬಾಯಿಂದ ಬರಲಿ. ಆ ಮಾತು ಅವರ ಬಾಯಿಯಿಂದ ಬಂದರೆ ನಾವು ಅವರಿಗೆ ಋಣಿಗಳಾಗುತ್ತೀವಿ. ಸೌಜನ್ಯ ಹೋರಾಟ ಧರ್ಮದ ಕಾರ್ಯ. ಈ ಮಗುವಿಗೆ ನ್ಯಾಯವನ್ನ ದೊರಕಿಸುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ದಕ್ಷಿಣ ಜಿಲ್ಲೆ ಧರ್ಮಸ್ಥಳದ ಪಾಂಗಳ ನಿವಾಸಿ ಚಂದ್ರಪ್ಪ ಗೌಡ ಹಾಗೂ ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅಕ್ಟೋಬರ್ 9, 2012ರಂದು ಸಂಜೆ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ ಸೌಜನ್ಯ ನಾಪತ್ತೆಯಾಗಿದ್ದಳು, ಮರು ದಿನ ರಾತ್ರಿ ಮಣ್ಣ ಸಂಕ ಬಳಿಯಲ್ಲಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಾಗಿತ್ತು.
ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಸಿಐಡಿಗೂ ಪ್ರಕರಣವನ್ನು ವಹಿಸಿದ್ದರು. ಆದರೆ, ಹಲವು ಹೋರಾಟಗಳ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಸಂತೋಷ್ ರಾವ್ ಆರು ಬಾರಿ ಸಿಬಿಐ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ತನಿಖೆ ನಡೆಸಿ 2016ರಲ್ಲಿ ವರದಿಯನ್ನು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿತ್ತು. 11 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಸಿಬಿಐ ಕೋರ್ಟ್ ಅಂತಿಮ ತೀರ್ಪು ನೀಡಿದ್ದು, ಸೌಜನ್ಯ ನಿಗೂಢ ಕೊಲೆ ಪ್ರಕರಣದಲ್ಲಿ ಆರೋಪಿಗಳು ಯಾರು ಎನ್ನುವುದು ನಿಗೂಢವಾಗಿಯೇ ಉಳಿದಿದೆ.
ಏನಿದು ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣ?
ಮುರುಘಾ ಮಠದ ಹಾಸ್ಟೆಲ್ನ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಶಿವಮೂರ್ತಿ ಶ್ರೀಯನ್ನು ಕಳೆದ ಸೆಪ್ಟಂಬರ್ 2ರಂದು ಚಿತ್ರದುರ್ಗದ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಒಡನಾಡಿ ಸಂಸ್ಥೆಯ ಸಹಾಯ ಪಡೆದು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯರು ದೂರು ದಾಖಲಿಸಿದ್ದರು. ಮುರುಘಾ ಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಸುದ್ದಿ ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು.