ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ಹೊಸಬರ ಅಬ್ಬರ ಜೋರಾಗಿದೆ. ಉತ್ತಮ ಗುಣಮಟ್ಟದ ಕಂಟೆಂಟ್ ಇರುವ ಸಿನಿಮಾಗಳ ಮೂಲಕ ಹೊಸಬರು ಕನ್ನಡ ಚಿತ್ರರಂಗದಲ್ಲಿ ಹೊಸ ಛಾಪನ್ನು ಮೂಡಿಸುತ್ತಿದ್ದಾರೆ. ಇದೀಗ ಮತ್ತೊಂದು ಹೊಸಬರ ಸಿನಿಮಾ ತಂಡ ವಿಭಿನ್ನ ಶೀರ್ಷಿಕೆಯ ಮೂಲಕವೇ ಸುದ್ದಿಯಲ್ಲಿದೆ. ಯುವ ಸಿನಿಮಾ ಉತ್ಸಾಹಿಗಳೇ ಸೇರಿಕೊಂಡುಮಾಡಿರುವ ಚಿತ್ರಕ್ಕೆ ನಿಮ್ಮೆಲ್ಲರ ಆಶೀರ್ವಾದ ಎಂಬ ಟೈಟಲ್ ಇಟ್ಟಿದ್ದು ಶೀರ್ಷಿಕೆ ಮೂಲಕವೇ ಗಮನ ಸೆಳೆಯುತ್ತಿದ್ದಾರೆ.
ನಿಮ್ಮೆಲ್ಲರ ಆಶೀರ್ವಾದ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನ ದಿನಚರಿಯನ್ನು ವಿಭಿನ್ನವಾಗಿ ಕಟ್ಟಿಕೊಡಲಾಗಿದೆ. ಈ ಚಿತ್ರದ ಮೂಲಕ ಪ್ರತೀಕ್ ಶೆಟ್ಟಿ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದು, ಭಿನ್ನ ಸಿನಿಮಾ ಖ್ಯಾತಿಯ ಪಾಯಲ್ ರಾಧಾಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ಎಂ. ಎನ್.ಲಕ್ಷ್ಮೀದೇವಿ, ಅರವಿಂದ ಬೋಳಾರ್, ಗೋವಿಂದೇಗೌಡ, ಸ್ವಾತಿ ಗುರುದತ್, ದಿನೇಶ್ ಮಂಗಳೂರು ಸೇರಿದಂತೆ ಹಿರಿಯ ಹಾಗೂ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ
ವರುಣ್ ಸಿನಿ ಕ್ರಿಯೇಷನ್ಸ್ ಚೊಚ್ಚಲ ಚಿತ್ರವಾಗಿ ಈ ಸಿನಿಮಾ ನಿರ್ಮಾಣವಾಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಮುಗಿಸಿ ಬಿಡುಗಡೆಗೆ ಹಂತಕ್ಕೆ ಕಾಲಿರಿಸಿದೆ. ಈ ಚಿತ್ರಕ್ಕೆ ಯುವ ನಿರ್ದೇಶಕ ರವಿಕಿರಣ್ ಆಕ್ಷನ್ ಕಟ್ ಹೇಳಿದ್ದು, ಸರವಣನ್ ಜಿ.ಎನ್.ಛಾಯಾಗ್ರಹಣ, ರಘು ನಿಡುವಳ್ಳಿ ಡೈಲಾಗ್, ರೂಪೇಂದ್ರ ಆಚಾರ್ ಕಲಾ ನಿರ್ದೇಶನ, ಸುನಾದ್ ಗೌತಮ್ ಸಂಗೀತ ಮತ್ತು ವಿವೇಕ್ ಚಕ್ರವರ್ತಿ ಹಿನ್ನೆಲೆ ಸಂಗೀತ, ಸುರೇಶ್ ಆರುಮುಗಂ ಸಂಕಲನ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ. ಕರಾವಳಿಯ ವಿವಿಧ ಭಾಗಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಈಗಾಗಲೇ ಒಂದಷ್ಟು ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ನಿಮ್ಮೆಲ್ಲರ ಆಶೀರ್ವಾದ ಚಿತ್ರ ಇದೇ ತಿಂಗಳು ರಾಜ್ಯಾದ್ಯಂತ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಚಿತ್ರತಂಡ ಇದೇ ವಾರ ಆಡಿಯೋ ಬಿಡುಗಡೆ ಮಾಡಲಿದೆ.