ಸಾವರ್ಕರ್ ಅವರನ್ನು ಅಂಡಮಾನ ಜೈಲಿಗೆ ಕರೆದುಕೊಂಡು ಹೋಗಲು ಮಹಾರಾಜ ಎಂಬ ಹಡಗು ಸನ್ನದ್ಧವಾಯಿತು. ಇದು ಕಾಕತಾಳಿಯ ಎಂಬಂತೆ ಸ್ವಾತಂತ್ರ್ಯ ಹೋರಾಟದ ಮಹಾರಾಜನೇ ಅದರಲ್ಲಿ ಪ್ರಯಾಣಿಸುತ್ತಿದ್ದ. ಅಂಡಮಾನದಲ್ಲಿ ಕಾರಾಗೃಹವಾಸದ ಶಿಕ್ಷೆಯ ಸಮಯದಲ್ಲಿ ಮುಸ್ಲಿಮ್ ವಾರ್ಡರಗಳು ಹಿಂದೂ ಕೈದಿಗಳಿಗೆ ಚಿತ್ರಹಿಂಸೆಯನ್ನು ಕೊಟ್ಟು ಅವರ ಧರ್ಮ ಪರಿವರ್ತನೆಯನ್ನು ಮಾಡುವ ವಿಷವರ್ತುಲವನ್ನು ರಚಿಸುತ್ತಿದ್ದರೆಂಬುದನ್ನೂ ಗಮನಿಸಿದ್ದರು. ಅವರು ಈ ಅನ್ಯಾಯದ ಧರ್ಮ ಪರಿವರ್ತನೆಯನ್ನು ಧೈರ್ಯದಿಂದ ಎದುರಿಸಿದ್ದರು. ಅಲ್ಲದೆ ಬಲವಂತದಿಂದ ಮುಸ್ಲಿಮ್ ಧರ್ಮಕ್ಕೆ ಪರಿವರ್ತಿತರಾಗಿದ್ದ ಅನೇಕ ಕೈದಿಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿ ಕೊಳ್ಳುವಲ್ಲಿ ಸಫಲರಾಗಿದ್ದರು.
ಸಾವರ್ಕರ್ ಕಾಲಾಪಾನಿಯ ಕಠಿಣ ಶಿಕ್ಷೆಯನ್ನು ಸಹಿಸಿಕೊಂಡಿದ್ದಲ್ಲದೇ ರಾಷ್ಟ್ರಕಾರ್ಯಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳದೇ ಉಳಿದಿದ್ದರಲ್ಲ ಅದೇ ವಿಶೇಷವಾದ್ದು. ಮಾನಸಿಕವಾಗಿ ಅವರನ್ನು ಜರ್ಝರಿತಗೊಳಿಸಬೇಕೆಂದು ಆಗಾಗ ಅವರನ್ನು ಏಕಾಂತವಾಸಕ್ಕೆ ತಳ್ಳಲಾಗುತ್ತಿತ್ತು. ಉಳಿದೆಲ್ಲದಕ್ಕಿಂತಲೂ ಭಯಾನಕವಾದ ಯಾತನೆ ಅದು. ತಿಂಗಳುಗಟ್ಟಲೆ ಯಾರ ಸಂಪರ್ಕವೂ ಇಲ್ಲದಂತೆ, ಯಾರೊಂದಿಗೂ ಮಾತೂ ಆಡದೇ, ಯಾರನ್ನೂ ನೊಡಲಾಗದೇ ಜೈಲಿನ ಒಳಗೆ ಮಲ-ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಾ ಕಠಿಣ ಕೆಲಸಗಳಿಂದ ದೇಹವನ್ನು ದಂಡಿಸಿಕೊಳ್ಳುವ ಪರಿ ಇದೆಯಲ್ಲ, ಬಲು ಯಾತನಾಮಯ. ಘಟಾನುಘಟಿಗಳೂ ಈ ಶಿಕ್ಷೆಗೆ ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಿದ್ದರು. ಉಲ್ಲಾಸ್ಕರ್ ದತ್ತ ಎಂಬ ಕ್ರಾಂತಿಕಾರಿ ಜರ್ಝರಿತವಾಗಿ ಅರೆಹುಚ್ಚನಾಗಿಹೋಗುವ ಸ್ಥಿತಿಗೆ ಬಂದುಬಿಟ್ಟಿದ್ದ. ಈ ರೀತಿ ಅನೇಕರು ಈ ಶಿಕ್ಷೆಗಳ ನಂತರ ಹೋರಾಟದ ಕಲ್ಪನೆಯನ್ನು ಕೈಬಿಟ್ಟುಬಿಡುತ್ತಿದ್ದರು. ಸಾವರ್ಕರ್ ಕೈಚೆಲ್ಲಲಿಲ್ಲ. ಜೈಲಿನೊಳಗೆ ಸುಧಾರಣೆಯ ಹೋರಾಟ ಆರಂಭಿಸಿದರು. ತಮ್ಮೊಡನಿದ್ದ ಕ್ರಾಂತಿಕಾರಿಗಳನ್ನು ಮಾನಸಿಕವಾಗಿ ಬಲವಾಗಿಡುತ್ತಾ ಉಪವಾಸ ಸತ್ಯಾಗ್ರಹಗಳಿಂದ ದೇಹತ್ಯಾಗದ ಕಲ್ಪನೆ ಕಟ್ಟಿಕೊಂಡಿದ್ದವರಿಗೆ ‘ಚೆನ್ನಾಗಿ ಊಟ ಮಾಡಿ. ಕೊಬ್ಬಿ ಬೆಳೆಯಿರಿ. ಆದರೆ ಕೆಲಸ ಮಾಡಬೇಡಿ’ ಎಂದು ಕಿವಿಮಾತು ಹೇಳುತ್ತಿದ್ದರು. ಸಾವರ್ಕರ್ರ ಆಗಮನದ ನಂತರ ಕಾಲಾಪಾನಿ ನಾಡಿನ ಕೇಂದ್ರಬಿಂದುವಾಯ್ತು. ಹೀಗಾಗಿ ಈ ಜೈಲಿನ ಕುರಿತ ಚರ್ಚೆಯೂ ದೇಶ-ವಿದೇಶಗಳಲ್ಲಿ ಭಿನ್ನ-ಭಿನ್ನ ಸ್ವರೂಪದಲ್ಲಿ ಆರಂಭವಾಯ್ತು. ಅನಿವಾರ್ಯವಾಗಿ ಜೈಲಿನೊಳಗೆ ಸುಧಾರಣೆಯ ಗಾಳಿಬೀಸಿತು. ಖೈದಿಗಳಿಗೆ ಊಟದಲ್ಲಿ ಬದಲಾವಣೆಯಾಯ್ತು, ಕೆಲಸದಲ್ಲಿ ಬದಲಾವಣೆಯಾಯ್ತು, ಉತ್ತಮ ಗ್ರಂಥಾಲಯದ ವ್ಯವಸ್ಥೆ ರೂಪುಗೊಂಡಿತು. ಆದರೆ ಸಾವರ್ಕರ್ರ ಸ್ಥಿತಿ ಮಾತ್ರ ಬದಲಾಗಲಿಲ್ಲ! ಇತರೆಲ್ಲರಿಗೂ ವರ್ಷಕ್ಕೊಮ್ಮೆಯಾದರೂ ಪರಿವಾರದವರು ಬಂದು ನೋಡಿಕೊಂಡು ಹೋಗುವ ಅವಕಾಶವಿತ್ತು. ಸಾವರ್ಕರ್ ಪರಿವಾರದವರಿಗೆ ಈ ಅವಕಾಶ ಸಿಕ್ಕಿದ್ದು ಎಂಟು ವರ್ಷಗಳ ನಂತರ. ಅದೂ ಸಾವರ್ಕರ್ ರವರ ಅತ್ತಿಗೆ ನಿರಂತರವಾಗಿ ಬ್ರಿಟೀಷ್ ಸರ್ಕಾರಕ್ಕೆ ಅರ್ಜಿಗಳನ್ನು ಗುಜರಾಯಿಸಿದ ನಂತರ. ದುರಂತವೇನು ಗೊತ್ತೇ? ಕೊನೆಗೂ ಅನುಮತಿ ದಕ್ಕಿದ್ದು ಅತ್ತಿಗೆ ತೀರಿಕೊಂಡ ಎರಡು ದಿನಗಳ ನಂತರವಷ್ಟೆ! ಈಗ ಹೇಳಿ ಮೇಲಿಂದ ಮೇಲೆ ಪತ್ರ ಬರೆಯುತ್ತಿದ್ದ ಸಾವರ್ಕರ್ರ ಕುರಿತಂತೆ ಬ್ರಿಟೀಷರು ಇಷ್ಟು ಕಠಿಣವಾಗಿ ನಡೆದುಕೊಂಡದ್ದಾದರೂ ಏಕೆ? ಇತರೆಲ್ಲ ಕ್ರಾಂತಿಕಾರಿಗಳಿಗೆ ಕೆಲವು ವರ್ಷ ಕಠಿಣವಾದ ಗಾಣಸುತ್ತುವ ಕೆಲಸದ ನಂತರ ಕಾಲಾಪಾನಿ ಜೈಲಿನ ಹೊರಗೆ ಹೋಗಿ ಕೆಲಸ ಮಾಡುವ ಅವಕಾಶ ದೊರೆಯುತ್ತಿತ್ತು. ಸಾವರ್ಕರ್ ರಿಗೆ ಮಾತ್ರ ದಕ್ಕಲಿಲ್ಲವೇಕೆ? ಏಕೆಂದರೆ ಅವರ ಪತ್ರಗಳನ್ನು ಬ್ರಿಟೀಷರು ನಂಬಲೇ ಇಲ್ಲ. ಒಮ್ಮೆಯಂತೂ ಸರ್ ರೆಜಿನಾಲ್ಡ್ ಕ್ರೆಡಾಕ್ ಎಂಬ ಸರ್ಕಾರದ ಗೃಹ ಕಾರ್ಯದರ್ಶಿಯನ್ನು ಈತನ ಮನಃ ಪರಿವರ್ತನೆಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳಲೋಸುಗ ಕಳಿಸಿಕೊಟ್ಟಿದ್ದರು. ಆತ ಏನೆಂದು ವರದಿ ಕೊಟ್ಟಿದ್ದ ಗೊತ್ತೇ? ‘ಈತನದ್ದು ಬರಿಯ ನಾಟಕ ಮತ್ತು ಭಾರತದ ಜೈಲಿಗೆ ಇವನನ್ನು ಕಳಿಸಿದರೆ ಆ ಕ್ಷಣವೇ ತಪ್ಪಿಸಿಕೊಂಡು ಬಿಡುತ್ತಾನೆ. ಅಂಡಮಾನಿನ ಹೊರಗೇನಾದರೂ ಕೆಲಸಕ್ಕೆಂದು ಅವಕಾಶಕೊಟ್ಟರೆ ವಿದೇಶೀ ಕ್ರಾಂತಿಕಾರಿಗಳು ಬಂದು ಇವನನ್ನು ಹಾರಿಸಿಕೊಂಡು ಹೋಗಿಬಿಡುತ್ತಾರೆ’ ಎಂದಿದ್ದ. ಇದೆಲ್ಲ ಒಂದು ಕಡೆಯಾದರೆ ಅವರು ಅಂಡಮಾನದ ಕತ್ತಲೆಯ ಕೋಣೆ ಗಳಲ್ಲಿಯೇ ಕವಿತೆಗಳನ್ನು ಬರೆದರು. ‘ಕಮಲಾ’, ‘ಗೋಮಾಂತಕ’ ಹಾಗೂ ”ವಿರಹೋಚ್ಛಾಸ’ದಂಥ ರಚನೆಗಳನ್ನೂ ಜೈಲಿನ ಆ ಚಿತ್ರಹಿಂಸೆಗಳಿಂದ ತಾವು ಅನುಭವಿಸಿದ್ದಂಥ ನೋವಿನ ವಾತಾವರಣದಲ್ಲಿಯೇ ಬರೆದಿದ್ದರು. ಅವರು ‘ಮೃತ್ಯು’ವನ್ನು ಸಂಬೋಧಿಸುತ್ತ ಬರೆದಂಥ ಕವಿತೆಯು ಅತ್ಯಂತ ಮಾರ್ಮಿಕವೂ ಹಾಗೂ ದೇಶಭಕ್ತಿಯಿಂದ ಕೂಡಿದುದೂ ಆಗಿದೆ.
ಸಾವರ್ಕರ್ ಅಂಡಮಾನದ ಕಾರಾಗೃಹದಲ್ಲಿ ನಡೆಯುತ್ತಿದ್ದಂಥ ಅಮಾನವೀಯ ಅತ್ಯಾಚಾರಗಳ ಸೂಚನೆಯನ್ನು ಯಾವುದೇ ರೀತಿಯಿಂದಲಾದರೂ ಭಾರತದ ಸಮಾಚಾರ ಪತ್ರಿಕೆಗಳಲ್ಲಿ ಪ್ರಕಟಗೊಳಿಸಬೇಕೆಂಬ ಪ್ರಯತ್ನ ದಲ್ಲಿ ಸಫಲರಾಗಿದ್ದರು. ಇದರಿಂದಾಗಿ ಇಡೀ ದೇಶದಲ್ಲಿ ಈ ಅತ್ಯಾಚಾರಗಳ ವಿರುದ್ಧ ಅತ್ಯಂತ ಪ್ರಬಲವಾದ ಧ್ವನಿ ಎದ್ದಿತ್ತು.
ಮುಂದುವರೆಯುತ್ತದೆ….