ಆಳಂದಿಯಿಂದ ಪಂಢರಪುರ
ದಿಂಡಿ ಎಂದರೇನು? –
ಈ ಸಮಯದಲ್ಲಿ ಯಾರಾದರು ಮಹಾರಾಷ್ಟ್ರದ ಮೂಲಕ – ವಿಶೇಷವಾಗಿ ಪುಣೆಯಿಂದ ಪಂಢರಪುರಕ್ಕೆ ಹಾದು ಹೋದರೆ – ಕೇಸರಿ ಧ್ವಜಗಳನ್ನು ಹಿಡಿದುಕೊಂಡು ನಡೆಯುವ ಜನರು ಮತ್ತು ಮಹಿಳೆಯರು ತಮ್ಮ ತಲೆಯ ಮೇಲೆ ತುಳಸಿ ಸಸಿಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು. ಈ ಗುಂಪನ್ನು ದಿಂಡಿ ಎಂದು ಕರೆಯಲಾಗುತ್ತದೆ – ಇದು ವಾರ್ಕಾರಿಗಳ ಘಟಕವಾಗಿದೆ. ವಾರಕರಿಗಳು ಭಗವಾನ್ ವಿಠಲನ ಅನುಯಾಯಿಗಳು, ಅವರು ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಭಾರತದ ಇತರ ಭಾಗಗಳಿಂದ ಪಂಢರಪುರ ದೇವಾಲಯಕ್ಕೆ ಪ್ರಯಾಣಿಸುತ್ತಾರೆ.
೧೮೨೦ರ ದಶಕದಲ್ಲಿ ಗ್ವಾಲಿಯರ್ನ ಶಿಂಧ್ಯಾರ ಆಸ್ಥಾನಿಕರಾದ ಹೈಬ್ರತ್ ರಾವ್ ಬುವಾ ಅರ್ಫಾಳ್ಕರ್ ಅವರು, ಜ್ಞಾನೇಶ್ವರರ ಪಾದುಕೆಯನ್ನು ಪಲ್ಲಕ್ಕಿ ಉತ್ಸವದಲ್ಲಿ ಪಂಢರಪುರಕ್ಕೆ ಕೊಂಡೊಯ್ಯುವ ಸಂಪ್ರದಾಯವನ್ನು ಆರಂಭಿಸಿದರು. ಇದನ್ನು ಪಂಢರಪುರ ವಾರಿ ಎಂದು ಕರೆಯುತ್ತಾರೆ.
ವಿಠ್ಠಲ ದೇವರಿಗೆ ಮಹಾರಾಷ್ಟ್ರೀಯರ ಭಕ್ತಿಯ ಅತ್ಯಂತ ಮಹೋನ್ನತ ಪ್ರದರ್ಶನವೆಂದರೆ ದಿಂಡಿ ಯಾತ್ರೆ, ಇದು ಪಂಢರಪುರದಲ್ಲಿ ಕೊನೆಗೊಳ್ಳುವ ಕಾಲ್ನಡಿಗೆಯ ಯಾತ್ರೆಯಾಗಿದೆ. ಕಳೆದ ಏಳುನೂರು ವರ್ಷಗಳಿಂದ ಇದನ್ನು ವಾರ್ಷಿಕವಾಗಿ ನಡೆಸಲಾಗುತ್ತಿದೆ.
ಪ್ರತಿ ವರ್ಷ ಪಂಢರಪುರ ವಾರಿ ಎಂಬ ೨೧ ದಿನಗಳ ಪಲ್ಲಕ್ಕಿ ಉತ್ಸವದಲ್ಲಿ ಸಂತ ಜ್ಞಾನೇಶ್ವರರ ಪಾದುಕೆಗಳನ್ನು ಆಳಂದಿಯಿಂದ ಪಂಢರಪುರಕ್ಕೆ ಕೊಂಡೊಯ್ಯಲಾಗುತ್ತದೆ. ಇದು ಪಂಢರಪುರಕ್ಕೆ ಆಷಾಢ ಏಕಾದಶಿಯ ದಿನ ಬಂದು ತಲುಪುತ್ತದೆ (ಜೂನ್ – ಜುಲೈ ಸಮಯದಲ್ಲಿ). ೧೫೦ ಕಿ.ಮಿ ಉದ್ದ ಸಾಗುವ ಪಲ್ಲಕ್ಕಿ ಉತ್ಸವವನ್ನು ನೋಡಲು ಲಕ್ಷಾಂತರ ವಾರ್ಕರಿ ಭಕ್ತರು ಸೇರುತ್ತಾರೆ …
ಮತ್ತೊಂದು ವಾರಇಯು ಮಳೆಗಾಲದ ನಾಲ್ಕು ತಿಂಗಳುಗಳಾದ ನಂತರ ಬರುವ ಕಾರ್ತಿಕ ಎಕಾದಶಿಯಂದು ಪ್ರಾರಂಭವಾಗುತ್ತದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸುತ್ತಾರೆ. ವಾರ್ಕರಿಗಳ ಭಾವನೆಯ ಪ್ರಕಾರ ಇರುವ ಆಷಾಢ ಮಾಸದಲ್ಲಿ ಜ್ಞಾನೇಶ್ವರರನ್ನು ( ಪಾದುಕೆಯನ್ನು) ಪಾಂಡುರಂಗನ ದರ್ಶನಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಅದೇ ಕಾರ್ತಿಕ ಮಾಸದಲ್ಲಿ ಪಾಂಡುರಂಗ ಜ್ಞಾನೇಶ್ವರನ್ನು ಆಳಂದಿಗೆ ಬಿಡಲು ಬರುತ್ತಾನೆ ಎಂದು ನಂಬಿಕೆ.
ಕರ್ನಾಟಕ-ಮಹಾರಾಷ್ಟ್ರ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ವಾರ್ಕರಿಗಳ ದಿಂಡಿ ಮುಖಾಂತರ ಬಿಸಿಲು, ಮಳೆ ಏನ್ನದೆ ವಿಠಲನ ದರ್ಶನಕ್ಕಾಗಿ ನೂರಾರು ಕಿಮಿ ದೂರದ ಪಂಡರಾಪುರಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಾರೆ. ಬರಿ ಭಕ್ತರು ಮಾತ್ರವಲ್ಲದೆ, ಆಕಳು ಕರುಗಳು ಕುದುರೆ ಸಹ ಇದರಲ್ಲಿ ಪಾಲ್ಗೊಳ್ಳುತ್ತವೆ. ಪಲ್ಲಕಿ ಹಾಗೂ ಭಗವಾಧ್ವಜವನ್ನು ಹಿಡಿದುಕೊಂಡು ಈ ಭಕ್ತ ಸಾಗರವು ಕ್ರಮಿಸುತ್ತದೆ. ವಿಶೇಷವೆಂದರೆ ವರ್ಷದಿಂದ ವರ್ಷಕ್ಕೆ ವಾರಿಯಲ್ಲಿ ಪಾಲ್ಗೊಳ್ಳುವ ವಿದೇಶಿಯರ ಸಂಖ್ಯೆ ಹೆಚ್ಚುತ್ತಲೇ ಇದೆ.
ಲಕ್ಷಾಂತರ ಜನರು ಒಟ್ಟಿಗೆ ಪಂಢರಪುರದ ಪಾಂಡುರಂಗನ ಭೇಟಿಗೆ ತೆರಳುವ ಇವರ ಜಾತಿ, ಧರ್ಮ, ಭೇಧವಿಲ್ಲ. ಮಾವುಲಿ ಅಂದರೆ ಮರಾಠಿಯಲ್ಲಿ ತಾಯಿ. ವಾರ್ಕರಿಗಳ ಆರಾಧ್ಯ ದೈವವಾಗಿರುವ ಪಾಂಡುರಂಗ ವಿಠ್ಠಲನನ್ನು ಅಲ್ಲಿನ ಜನರು ತಂದೆ-ತಾಯಿ ಎಂದೇ ಸಂಬೋಧಿಸುತ್ತಾರೆ. ಸಂತ ಜ್ಞಾನೇಶ್ವರರು ಮೊದಲು ಪಾಂಡುರಂಗನನ್ನು ಮಾವುಲಿ ಎಂದು ಕರೆದರು.
ಸೇವೆ ಎಂಬ ಮಹಾಶಕ್ತಿ : ‘ಮಾವುಲಿ ತುಮ್ಚೆ ಪಾಯ್ ದುಖ್ತೇತ್ ಕಾಯ್? ಡೋಕ ದುಃಖತಯ?’ (ಮಾವುಲಿ ನಿಮ್ಮ ಕಾಲು ನೋವುತ್ತದೆಯೇ, ತಲೆನೋವಿದೆಯೇ?)-ಹೀಗೆ ಪ್ರೇಮಭಾವದಿಂದ ವಿಚಾರಿಸುವ ವೈದ್ಯರು ವಾರಕರಿಗಳನ್ನು ದೇವರ ಪ್ರತಿರೂಪವೆಂದೇ ಭಾವಿಸುತ್ತಾರೆ. ಅದಕ್ಕೆಂದೆ, ದಿನವಿಡೀ ನಡೆದು ರಾತ್ರಿ ವಾಸ್ತವ್ಯಕ್ಕೆ ಹಳ್ಳಿಯಲ್ಲೋ, ಗ್ರಾಮದ ಹೊರವಲಯದಲ್ಲೋ ನಿಲ್ಲುವ ವಾರಕರಿಗಳ ಬಳಿ ಹೋಗಿ ಅವರ ಕಾಲಿಗೆ ಮಾಲಿಶ್ ಮಾಡುತ್ತಾರೆ, ಉಚಿತವಾಗಿ ಚಿಕಿತ್ಸೆ, ಔಷಧ ನೀಡುತ್ತಾರೆ. ಬಿಸಿನೀರಿನಿಂದ ಕಾಲು ತೊಳೆಯುತ್ತಾರೆ. ಮಳೆ, ಗಾಳಿ ಲೆಕ್ಕಿಸದೆ ಹೊರಟಿರುವ ಅವರ ಆರೋಗ್ಯದಲ್ಲಿ ಏರುಪೇರು ಆಗದಿರಲಿ ಎಂದು ಎಲ್ಲ ಬಗೆಯ ಕಾಳಜಿ ವಹಿಸುತ್ತಾರೆ.
ದಿಂಡಿ ಹಾದೂ ಹೋಗುವ ಗ್ರಾಮಸ್ಥರು ಊರಿನ ತುಂಬ ಚಿತ್ತಾಕರ್ಷಕ ರಂಗೋಲಿಗಳನ್ನು ರಚಿಸಿ ವಾರಕರಿಗಳನ್ನು ಸ್ವಾಗತಿಸುತ್ತಾರೆ. ಹೋಟೆಲಿನವರು ಉಚಿತ ತಿಂಡಿ, ಊಟ, ಚಹಾದ ವ್ಯವಸ್ಥೆ ಮಾಡುತ್ತಾರೆ. ಎಷ್ಟೋ ಜನ ಸಿಹಿಪದಾರ್ಥಗಳನ್ನು, ಹಣ್ಣುಹಂಪಲುಗಳನ್ನು ವಿತರಿಸುತ್ತಾರೆ.
ನಾಮಸ್ಮರಣದ ಬಲದಿಂದಲೇ ಭಗವಂತನನ್ನು ಕಾಣಬಹುದು ಎಂಬ ಸಂದೇಶ ನೀಡಿದವನು ಪಾಂಡುರಂಗ. ವಿಠೋಬನ ಕಥೆಯೇ ಅಂತಹದ್ದು ತಂದೆ ತಾಯಿಯ ಸೇವೆಯಲ್ಲಿ ಪಾಂಡುರಂಗನ ನಾಮ ಸ್ಮರಣೆಯೊಂದಿಗೆ ನಿರತನಾಗಿದ್ದ ಪುಂಡಲೀಕನಿಗೆ ದರುಶನ ನೀಡಲು ಸ್ವತಃ ಪಾಂಡುರಂಗನೇ ಬರುತ್ತಾನೆ, ಆದರೆ ತಂದೆ ತಾಯಿಯ ಸೇವೆಯಲ್ಲಿ ಯಾವುದೇ ರೀತಿಯ ಅಡಚಣೆ ಬರಬಾರದು ಎಂದು ಕಾರಣದಿಂದ ಅಲ್ಲೇ ಪಕ್ಕದಲ್ಲಿದ್ದ ಇಟ್ಟಂಗಿ (ವಿಟಾ) ಗಳನ್ನು ಎಸೆದು ಅದರ ಮೇಲೆ ನಿಲ್ಲು (ಉಭಾ) ಎಂದು ಹೇಳುತ್ತಾನೆ. ಅದರಂತೆ ಪಾಂಡುರಂಗನು ಅದರ ಮೇಲೆ ನಿಲ್ಲುತ್ತಾನೆ. ಅವನೇ ವಿಠೋಭ ಎಂಬ ಹೆಸರಿನಿಂದ ಕರೆಯಲ್ಪಡುತ್ತಾನೆ.
ಇವರಲ್ಲಿ ಸಮಾಜಪರ ಸಂವೇದನೆಯನ್ನೂ ತುಂಬಿಬಿಟ್ಟರೆ ಸುಲಭ ಎಂಬ ಚಿಂತನೆಯಿಂದ ಹಲವು ಹೊಸ ಪ್ರಯೋಗಗಳು ನಡೆದಿವೆ. ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆ, ಸಾರಾಯಿ, ರೈತರ ಆತ್ಮಹತ್ಯೆ ವಿರುದ್ಧ ಹಲವು ಸಾಮಾಜಿಕ ಸಂಘಟನೆಗಳು ಜಾಗೃತಿ ಮೂಡಿಸಿವೆ. ಈ ಬಾರಿ ವಾರಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ, ನೇತ್ರದಾನ, ದೇಹದಾನ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಸ್ತ್ರೀ ಶಕ್ತಿ ದರ್ಶನ : ಪುರುಷರಷ್ಟೇ ಅಲ್ಲ ಅಷ್ಟೇ ಸಂಖ್ಯೆಯಲ್ಲಿ ಮಹಿಳೆಯರೂ ವಾರಿಯಲ್ಲಿ ಭಾಗವಹಿಸುತ್ತಾರೆ. ಗ್ರಾಮದ ಹೊರವಲಯದಲ್ಲಿ ರಾತ್ರಿ ವಾಸ್ತವ್ಯಕ್ಕೆ ತಂಗಿದಾಗ ನೂರಾರು ಜನರಿಗೆ ಬಯಲಲ್ಲೇ ಅಡುಗೆ ಮಾಡುವ, ಅದನ್ನು ಅಷ್ಟೇ ಪ್ರೀತಿಯಿಂದ ಬಡಿಸುವ ಮಹಿಳೆಯರು ನಸುಕಿನ ಜಾವದಲ್ಲೇ ಕೀರ್ತನೆಯನ್ನೂ ಮಾಡುತ್ತಾರೆ. ಯಾರಾದರೂ ಆಯಾಸಗೊಂಡಿದ್ದರೆ ಅವರಲ್ಲಿ ಸ್ಪೂರ್ತಿ ತುಂಬುತ್ತ ತಮ್ಮ ಜತೆ ಮುಂದೆ-ಮುಂದೆ ಕರೆದುಕೊಂಡು ಹೋಗುತ್ತಾರೆ
ಈ ಪಲ್ಲಕ್ಕಿಗಳು ಜೂನ್ 28ರ ಸಂಜೆ ಪಾಂಡುರಂಗನ ಸನ್ನಿಧಾನವಾದ ಪಂಢರಪುರವನ್ನು ತಲುಪಲಿವೆ. 29 ರಂದು ಆಷಾಢ ಏಕಾದಶಿ ಇದ್ದು, ಅಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದಂಪತಿ ಗಳಿಗೆ ಮತ್ತು ವಾರಕರಿ ದಂಪತಿಗಳಿಗೆ ಪಾಂಡುರಂಗ-ರುಕ್ಮಿಣಿಗೆ ಪ್ರಥಮ ಪೂಜೆ ಸಲ್ಲಿಸುವ ಗೌರವ ದೊರೆಯುತ್ತದೆ. ಒಂದು ವಾರದ ನಂತರ ಗೋಪಾಳಕಾಲಾ ಸಂಪನ್ನಗೊಂಡ ಬಳಿಕ ಯಾತ್ರಾರ್ಥಿಗಳು ಊರಿಗೆ ಮರಳುತ್ತಾರೆ.