ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು, ಹದಿಹರೆಯದವರಿಂದ ಹಿಡಿದು ವಯಸ್ಸಾದವರವರೆಗೂ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕದ ವಿಚಾರವಾಗಿದೆ. ರಕ್ತನಾಳಗಳಲ್ಲಿ ಕೊಬ್ಬು ತುಂಬಿಕೊಂಡು ರಕ್ತ ಸಂಚಾರಕ್ಕೆ ಅಡ್ಡಿಯಾಗುವುದರಿಂದ ಹೃದಯಾಘಾತ ಸಂಭವಿಸುತ್ತದೆ. ಹೃದಯಾಘಾತ ಬರುವ ಮೊದಲು ಕೆಲವೊಂದು ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತದೆ, ಆಗ ನಾವು ಆ ಲಕ್ಷಣಗಳನ್ನು ಕಡೆಗಣಿಸದೆ ಮುನ್ನೆಚ್ಚರಿಗೆ ತೆಗೆದುಕೊಳ್ಳಬೇಕು.
ವಿಪರೀತ ಸುಸ್ತು:
ನಿರಂತರವಾಗಿ ಕೆಲಸ ಮಾಡುವಾಗ ಸಾಮಾನ್ಯವಾಗಿ ಆಯಾಸ ಉಂಟಾಗುತ್ತದೆ. ಒಂದು ವೇಳೆ ನಿಮಗೆ ಕೆಲಸ ಮಾಡದೇ ಇದ್ದರೂ ಕೂಡಾ ಆಯಾಸವಾಗುತ್ತಿದ್ದರೆ, ನಿಮ್ಮ ಆರೋಗ್ಯ ಸರಿಯಾಗಿಲ್ಲ ಎಂದು ಅರ್ಥ. ವಿಪರೀತ ಸುಸ್ತಾಗುವುದು ಹೃದಯಾಘಾತದ ಅತ್ಯಂತ ಮುಖ್ಯ ಮುನ್ಸೂಚನೆಯಾಗಿದೆ. ರಕ್ತನಾಳಗಳ ಒಳಗೆ ಕೊಬ್ಬು ಶೇಖರಣೆಗೊಂಡು ಹೃದಯಕ್ಕೆ ಸಾಕಷ್ಟು ರಕ್ತಪರಿಚಲನೆ ದೊರೆಯದೇ ಇದ್ದಾಗ ಈ ಲಕ್ಷಣ ಕಾಣಿಸಿಕೊಳ್ಳುತ್ತದೆ.
ಎದೆ ನೋವು :
ಎದೆಯಲ್ಲಿ ನೋವು ಒಂದು ವೇಳೆ ಎದೆಯ ಎಡಭಾಗದ ಕೊಂಚವೇ ಮೇಲ್ಭಾಗದಲ್ಲಿ ಸೂಜಿಯಲ್ಲಿ ಚುಚ್ಚಿದ ನೋವಿನ ಅನುಭವವಾದರೆ ಹಾಗೂ ಇದರೊಂದಿಗೇ ಕೈ, ಬೆನ್ನು ಮತ್ತು ಭುಜಗಳಲ್ಲಿಯೂ ನೋವು ಕಾಣಿಸಿಕೊಂಡಾಗ, ಅವುಗಳನ್ನು ನಿರ್ಲಕ್ಷಿಸಬೇಡಿ ಇದು ಹೃದಯಾಘಾತ ಲಕ್ಷಣವಾಗಿದೆ.
ಕಣ್ಣು ಮಂಜಾಗುವುದು:
ಒಂದು ವೇಳೆ ರಕ್ತಪೂರೈಕೆಯ ಪ್ರಮಾಣದಲ್ಲಿ ಕಡಿಮೆಯಾದರೆ ಸುಸ್ತಾಗುವ ಜೊತೆಗೇ ಕಣ್ಣು ಮಂಜಾಗಿ ತಲೆ ಸಹಾ ತಿರುಗುತ್ತದೆ. ವಿಶೇಷವಾಗಿ ಮೆದುಳಿಗೆ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ರಕ್ತ ಸಿಗದೇ ಇರುವುದು ಇದಕ್ಕೆ ಕಾರಣವಾಗಿದ್ದು ಈ ಸೂಚನೆ ಸಹಾ ಹೃದಯಾಘಾತದ ಪ್ರಮುಖ ಪೂರ್ವಮುನ್ಸೂಚನೆಯಾಗಿದೆ.
ಅತಿಯಾಗಿ ಬೆವರುವುದು:
ಸಾಮಾನ್ಯವಾಗಿ ಮೈ ಬಿಸಿಯಾದಾಗಲೇ ದೇಹವನ್ನು ತಣ್ಣಗಾಗಿಸಲು ಬೆವರು ಹರಿಯಲಾರಂಭಿಸುತ್ತದೆ. ಒಂದು ವೇಳೆ ದೇಹ ತಣ್ಣಗಿದ್ದಾಗಲೂ ಬೆವರು ಹರಿಯಲಾರಂಭಿಸಿದರೆ ದೇಹ ಯಾವುದೋ ಒತ್ತಡಕ್ಕೆ ಒಳಗಾಗಿದೆ ಎಂದು ತಿಳಿದುಕೊಳ್ಳಬೇಕು. ಒಂದು ವೇಳೆ ದೇಹದಲ್ಲಿ ಸೂಕ್ತ ಪ್ರಮಾಣದ ರಕ್ತಪ್ರವಾಹವನ್ನು ಪಡೆಯದೇ ಇದ್ದರೆ ದೇಹದಲ್ಲಿ ಶಕ್ತಿಯೇ ಇಲ್ಲದಂತೆ ಹಾಗೂ ತಣ್ಣಗಾದಂತೆ ಅನ್ನಿಸಬಹುದು. ಈ ಸಮಯದಲ್ಲಿ ಬೆವರು ಹರಿಯುವುದು ಸಹಾ ಹೃದಯಾಘಾತದ ಮುನ್ನೆಚ್ಚರಿಕೆಯಾಗಿದೆ.
ಉಸಿರಾಟಲು ಕಷ್ಟವಾಗುವುದು:
ಉಸಿರು ತೆಗೆದುಕೊಳ್ಳಲು ಕಷ್ಟವಾಗುವುದು ಕೂಡಾ ಹೃದಯಾಘಾತದ ಪ್ರಮುಖ ಲಕ್ಷಣವಾಗಿದೆ. ಹೃದಯದ ಕೆಲಸ ಮಾಡಲು ಶ್ವಾಸಕೋಶಗಳೂ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡಬೇಕಾಗಿರುತ್ತದೆ. ಯಾವಾಗ ಹೃದಯದಿಂದ ರಕ್ತಪರಿಚಲನೆ ಕಡಿಮೆಯಾಯಿತೋ, ಶ್ವಾಸಕೋಶಕ್ಕೂ ರಕ್ತಪೂರೈಕೆ ಕಡಿಮೆಯಾಗುತ್ತದೆ ಹಾಗೂ ಪೂರ್ಣಪ್ರಮಾಣದಲ್ಲಿ ಶ್ವಾಸ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಉಸಿರಾಟ ಕಷ್ಟಕರವಾಗುತ್ತದೆ.
ಅನಿಯಮಿತ ಹೃದಯ ಬಡಿತ :
ರಕ್ತನಾಳಗಳಲ್ಲಿ ಅಥವಾ ಹೃದಯದ ಸುತ್ತ ರಕ್ತ ಹೆಪ್ಪುಗಟ್ಟಲು ಪ್ರಾರಂಭಿಸಿದಾಗ, ಹೃದಯವು ಅನಿಯಮಿತವಾಗಿ ಬಡಿಯುತ್ತದೆ ಇದು ಕೂಡ ಪ್ರಮುಖವಾದ ಹೃದಯಾಘಾತ ಲಕ್ಷಣಗಳು.
ಈ ಮೇಲಿನ ಲಕ್ಷಣಗಳು ನಿಮ್ಮ ದೇಹದಲ್ಲಿ ಉಂಟಾದರೆ ನಿಲ್ಯಕ್ಷಿಸಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ.