ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಏಷ್ಯಾಕಪ್ 2023 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಕೊನೆಗೂ ಪ್ರಕಟವಾಗಿದ್ದು, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಗುರುವಾರ ಹೈಬ್ರಿಡ್ ಮಾದರಿ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಈ ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳು ನಡೆಯಲ್ಲಿದ್ದು, ಆ ಪೈಕಿ 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಬಾಕಿ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 17, 2023 ರವರೆಗೆ ಈ 13 ರೋಚಕ ODI ಪಂದ್ಯಗಳು ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡುವುದಂತೂ ಖಚಿತವಾಗಿದೆ.
ಏಷ್ಯಾ ಕಪ್ 2023 ರಲ್ಲಿ ಒಟ್ಟು 2 ಗುಂಪುಗಳಲ್ಲಿ ಟೂರ್ನಿ ಆಯೋಜನೆ ಮಾಡಲಾಗಿದೆ.
2023 ರ ಆವೃತ್ತಿಯು ಎರಡು ಗುಂಪುಗಳನ್ನು ಒಳಗೊಂಡಿರುತ್ತದೆ, ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯಬೇಕಾಗಿದೆ. ಸೂಪರ್ ಫೋರ್ ಹಂತದಿಂದ ಅಗ್ರ ಎರಡು ತಂಡಗಳು ನಂತರ ಫೈನಲ್ನಲ್ಲಿ ಮುಖಾಮುಖಿಯಾಗುತ್ತವೆ. ಅದರಲ್ಲಿ ವಿಜಯಶಾಲಿಯಾದವರು ಏಷ್ಯಾ ಕಪ್ ನ್ನು ಗೆದ್ದುಕೊಳ್ಳುತ್ತಾರೆ.
ಕ್ರಿಕೆಟ್ನ ಈ ಟೂರ್ನಿಯನ್ನು ಅತ್ಯುತ್ತಮವಾಗಿ ವೀಕ್ಷಿಸಲು ವಿಶ್ವದಾದ್ಯಂತದ ಅಭಿಮಾನಿಗಳನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಎಸಿಸಿ ಅಭಿಪ್ರಾಯ ವ್ಯಕ್ತಪಡಿಸಿದೆ.