ಹಾವೇರಿ: ಕಿಕ್ಕಿರಿದು ತುಂಬಿ ಚಲಿಸುತಿದ್ದ ಸರ್ಕಾರಿ ಬಸ್ ನಿಂದ ಬಿದ್ದು ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕುಸನೂರು ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ಮಧು ಕುಂಬಾರ(14) ಎಂದು ಗುರುತಿಸಲಾಗಿದ್ದು ಇವಳು ಸೋಮವಾರ ವಾಸನ ಗ್ರಾಮದಿಂದ ಕುಸನೂರು ಶಾಲೆಗೆ ಹೋಗಲು ಸರ್ಕಾರಿ ಬಸ್ ಹತ್ತಿದ್ದಳು. ಬಸ್ಸಿನಲ್ಲಿ ಮಹಿಳೆಯರೂ ಸೇರಿದಂತೆ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ಜನಜಂಗುಳಿ ಇದ್ದುದರಿಂದ ಬಸ್ ಹತ್ತಿದ್ದ ಮಧು ವಿಗೆ ಮೆಟ್ಟಿಲಿನಿಂದ ಮೇಲೆ ಹತ್ತಿ ಒಳಗೆ ಹೋಗಲು ಆಗಿಲ್ಲವಾದ್ದರಿಂದ ಕಂಬಿ ಹಿಡಿದುಕೊಂಡು ನಿಂತಿದ್ದಳು.
ತುಂಬಿದ ಬಸ್ ಚಲಿಸುವಾಗ ಟರ್ನ್ ನಲ್ಲಿ ಬಸ್ಸು ಒಂದೇ ಕಡೆಗೆ ವಾಲಿದೆ. ಆಗ ಕಂಬಿ ಹಿಡಿದು ನಿಂತಿದ್ದ ಹುಡುಗಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾಳೆ.
ಆಕೆಯನ್ನು ಕೂಡಲೇ ಹಾನಗಲ್ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆಗೂ ಮುನ್ನವೇ ಮೃತಪಟ್ಟಿದ್ದಾಳೆ.
ಕೇವಲ ಐದು ದಿನದ ಹಿಂದಷ್ಟೆ ಶಾಲೆಗೆ ಸೇರಿದ್ದ ಈಕೆ ಪೋಷಕರ ಒಬ್ಬಳೇ ಮಗಳಾಗಿದ್ದಳು. ಈ ಕುರಿತು ಪೋಷಕರು ಬಸ್ ಸಿಬ್ಬಂದಿಯ ವಿರುದ್ದ ಮೊಕದ್ದಮೆ ದಾಖಲಿಸಿದ್ದಾರೆ.
ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ್ದ ಭರವಸೆ ಈಡೇರಿಸಲು ಜೂನ್ ೧೧ ರಿಂದಲೇ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲಿಲ್ಲ, ಉಚಿತ ಆಗಿರುವುದರಿಂದ ಸಹಜವಾಗಿಯೇ ಮಹಿಳಾ ಪ್ರಯಾಣಿಕರ ಸಂಖ್ಯೆ ಬಸ್ಸುಗಳಲ್ಲಿ ನಿನ್ನೆಯಿಂದಲೇ ಹೆಚ್ಚಾಗಿದೆ.
ಮಹಿಳೆಯರ ಒಳಿತಿಗಾಗಿ ಮಾಡಿರುವ ಯೋಜನೆಯೊಂದು ಜಾರಿಯಾದ ಎರಡೇ ದಿನಕ್ಕೆ ಶಾಲಾ ಬಾಲಕಿಯೊಬ್ಬಳ ದುರಂತ ಅಂತ್ಯಕ್ಕೆ ಕಾರಣವಾಗಿರುವುದು ದುರ್ದೈವದ ಸಂಗತಿ ಆಗಿದೆ.