ಇಂದಿನ ವಿಶೇಷ ಸುದ್ದಿಗಳ ಹೂರಣ; ಇಲ್ಲಿದೆ ಕ್ವಿಕ್ ರೌಂಡ್ ಅಪ್
ವಿಶ್ವದ ಹಲವೆಡೆ ಇನ್ ಸ್ಟಾಗ್ರಾಮ್ ಡೌನ್!
ಭಾರತ ಸೇರಿದಂತೆ ವಿಶ್ವದ ಹಲವೆಡೆ ಮೆಟಾ ಒಡೆತನದ ಪ್ರಸಿದ್ಧ ಅಪ್ಲಿಕೇಷನ್ ಇನ್ ಸ್ಟಾಗ್ರಾಮ್ ಡೌನ್ ಆಗಿದೆ.
ಬಳಕೆದಾರರಿಗೆ ರಿಫ್ರೆಶ್ ಮಾಡಲಾಗದೆ ಹಾಗೂ ಏನೋ ತಪ್ಪಾಗಿದೆ ಎಂಬ ಸಂದೇಶಗಳು ತೋರಿಸಿದೆ.
ಬಳಕೆದಾರರಿಗೆ ಇನ್ ಸ್ಟಾಗ್ರಾಮ್ ಲಾಗಿನ್ ಆಗೋಕೆ, ಫೋಟೋ, ವೀಡಿಯೋ ಶೇರ್ ಮಾಡಲು ಹಾಗೂ ಡೌನ್ ಲೋಡ್ ಮಾಡುವುದಕ್ಕೆ ಸಮಸ್ಯೆ ಎದುರಾಗಿದೆ.
ಸುಮಾರು 2 ಲಕ್ಷ ಬಳಕೆದಾರರಿಗೆ ಈ ಸಮಸ್ಯೆ ಎದುರಾಗಿದ್ದು, ಹಲವರು ಟ್ವಿಟರ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಡೌನ್ ಡೆಕ್ಕರ್ ವರದಿಯ ಪ್ರಕಾರ, ಶೇ. 44ರಷ್ಟು ಬಳಕೆದಾರರಿಗೆ ಆಪ್ ನಲ್ಲಿ ಸಮಸ್ಯೆ ಎದುರಾಗಿದ್ದು, ಇನ್ನು ಶೇ.32 ರಷ್ಟು ಜನರಿಗೆ ವೆಬ್ ನಲ್ಲಿ ತೊಂದರೆ ಕಂಡುಬಂದಿದೆ. ಶೇ.24 ರಷ್ಟು ಜನರಿಗೆ ಸರ್ವರ್ ಸಮಸ್ಯೆಯಾಗಿದೆ ಎಂದು ತಿಳಿಸಿದೆ.
ವೃಕ್ಷಮಹಿಳೆ ತುಳಸಿ ಗೌಡ ಅವರಿಗೆ ಧಾರವಾಡ ಕೃಷಿ ವಿವಿಯಿಂದ ಡಾಕ್ಟರೇಟ್!
ಪದ್ಮಶ್ರೀ ಪುರಸ್ಕೃತೆ ಹಾಲಕ್ಕಿ ಮಹಿಳೆ ತುಳಸಿ ಗೌಡ ಅವರಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಘೋಷಣೆ ಮಾಡಿದೆ.
ಕೃಷಿ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಕೃಷಿ ವಿವಿ 36ನೇ ಘಟಿಕೋತ್ಸವದ ಹೊತ್ತಿನಲ್ಲಿ ತುಳಸಿ ಗೌಡ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಲು ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಹಾಗೂ ಕೃಷಿ ವಿವಿಯ ಕುಲಪತಿಗಳೂ ಆಗಿರುವ ಥಾವರ್ ಚಂದ್ ಗೆಹ್ಲೋಟ್ ಸೂಚಿಸಿದ್ದಾರೆ.
ಜೂನ್ 16ರಂದು ಬೆಳಗ್ಗೆ 11 ಗಂಟೆಗೆ ಧಾರವಾಡ ಕೃಷಿ ವಿವಿಯ ರೈತ ಜ್ಞಾನಾಭಿವೃದ್ದಿ ಕೇಂದ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪದ್ಮಶ್ರೀ ತುಳಸಿ ಗೌಡ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುವುದು.
ಈ ಕಾರ್ಯಕ್ರಮದ ಬಗ್ಗೆ ಕೃಷಿ ವಿವಿಯ ಕುಲ ಸಚಿವರ ಕಾರ್ಯಾಲಯದಿಂದ ಪದ್ಮಶ್ರೀ ತುಳಸಿ ಗೌಡ ಅವರಿಗೆ ಆಹ್ವಾನ ಪತ್ರ ಕಳುಹಿಸಲಾಗಿದೆ.
ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಮೂವರು ಸಾವು
ಮಣಿಪುರದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ ಅನ್ನುವಷ್ಟರಲ್ಲಿ ಇಂದು ಮತ್ತೆ ಹಿಂಸಾಚಾರ ಸೃಷ್ಟಿಯಾಗಿದೆ. ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಹಿಳೆ ಸೇರಿದಂತೆ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ ಕಾಂಗ್ ಪೋಕ್ಪಿ ಜಿಲ್ಲೆ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಗಡಿಯಲ್ಲಿರುವ ಖೋಕೆನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬಂದೂಕುಧಾರಿಗಳು ಗ್ರಾಮದ ಮೇಲೆ ಗುಂಡಿನ ದಾಳಿ ನಡೆಸಿದ್ದು, ಕೂಡಲೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಸೇನಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಪ್ರಧಾನಿ ಮೋದಿ ಪದವಿ ಕುರಿತು ಮಾಹಿತಿ: ತೀರ್ಪು ಮರುಪರಿಶೀಲಿಸುವಂತೆ ಹೈಕೋರ್ಟ್ ಮೊರೆ ಹೋದ ಕೇಜ್ರಿವಾಲ್
ಪ್ರಧಾನಿ ನರೇಂದ್ರ ಮೋದಿ ಅವರು ಪದವಿ ಪಡೆದಿರುವ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರೀಯ ಮಾಹಿತಿ ಆಯೋಗ ನೀಡಿದ್ದ ಆದೇಶವನ್ನು ರದ್ದುಗೊಳಿಸಿ, ತಮಗೆ 25 ಸಾವಿರ ರೂ. ದಂಡ ವಿಧಿಸಿರುವ ತೀರ್ಪನ್ನು ಮರು ಪರಿಶೀಲಿಸಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಮಾ.31ರಂದು ದಾಖಲೆಗಳಲ್ಲಿ ದೋಷಗಳಿರುವುದರ ಬಗ್ಗೆ ನೀಡಿರುವ ತೀರ್ಪಿಗೆ ತಡೆ ನೀಡಬೇಕೆಂದು ಕೇಜ್ರಿವಾಲ್ ಅವರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರ ಏಕಸದಸ್ಯ ನ್ಯಾಯಪೀಠವು ಕೇಜ್ರಿವಾಲ್ ಅವರ ಅರ್ಜಿಯನ್ನು ಪುರಸ್ಕರಿಸಿ, ನೋಟಿಸ್ ಜಾರಿ ಮಾಡಿದೆ.
ಪ್ರಧಾನಿ ಮೋದಿ ಅವರ ಪದವಿ ಕುರಿತು ಮಾಹಿತಿ ನೀಡುವಂತೆ ನಾನು ಅರ್ಜಿ ಸಲ್ಲಿಸಿರಲಿಲ್ಲ. ಸಿಐಸಿ ಸ್ವಯಂ ಪ್ರೇರಿತವಾಗಿ ಈ ವಿಷಯ ಕೈಗೆತ್ತಕೊಡಿದ್ದು, ದಾಖಲೆಗಳಲ್ಲಿನ ದೋಷಗಳಿಂದ ನನಗೆ ದಂಡ ವಿಧಿಸಲಾಗಿದೆ ಈ ಕಾರಣಕ್ಕೆ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಕೇಜ್ರಿವಾಲ್ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.