ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಮಾವಿನಹಣ್ಣು ಆರೋಗ್ಯ ವೃದ್ಧಿಸುವ ಜೊತೆಗೆ ತ್ವಚೆಯ ಅಂದವನ್ನೂ ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಮ್ಯಾಂಗೋ ಫೇಸ್ಪ್ಯಾಕ್ ಹಚ್ಚುವುದರಿಂದ ತ್ವಚೆಯ ಹಲವು ರೀತಿಯ ಪ್ರಯೋಜನಗಳಿವೆ. ಮಾವಿನಹಣ್ಣು ಆರೋಗ್ಯದೊಂದಿಗೆ ಸೌಂದರ್ಯಕ್ಕೂ ಮದ್ದು ಎನ್ನಬಹುದಾಗಿದೆ.
ಮಾವಿನಹಣ್ಣಿನ ಫೇಸ್ಪ್ಯಾಕ್ ತಯಾರಿಸುವುದು ಹೇಗೆಂದರೆ,
ಮಾವಿನಹಣ್ಣನ್ನು ಚೆನ್ನಾಗಿ ಕಿವುಚಿ ನುಣ್ಣನೆಯ ಪೇಸ್ಟ್ ತಯಾರಿಸಿ. ಅದಕ್ಕೆ ಜೇನುತುಪ್ಪ ಹಾಗೂ ಮೊಸರು ಮಿಶ್ರಣ ಮಾಡಿ ಫೇಸ್ಪ್ಯಾಕ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ 10 ರಿಂದ 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಬೇಕು.
ಮಾವಿನಹಣ್ಣಿನ ಫೇಸ್ಪ್ಯಾಕ್ನ ಉಪಯೋಗಗಳು
ತೇವಾಂಶ ನೀಡುತ್ತದೆ: ಮಾವಿನಹಣ್ಣಿನಲ್ಲಿ ನೀರಿನಾಂಶ ಸಮೃದ್ಧವಾಗಿರುತ್ತದೆ. ಇದು ಚರ್ಮದ ತೇವಾಂಶ ಹೆಚ್ಚುವಂತೆ ಮಾಡಿ, ಮಾಯಿಶ್ಚರೈಸ್ ಮಾಡುತ್ತದೆ. ಇದು ನೈಸರ್ಗಿಕವಾಗಿ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಹಾಗಾಗಿ ಇದರ ಫೇಸ್ ಪ್ಯಾಕ್ ಉತ್ತಮ ತೇವಾಂಶ ನೀಡುತ್ತದೆ ಎನ್ನಬಹುದು.
ಅಕಾಲಿಕ ವಯಸ್ಸಿನ ಲಕ್ಷಣಗಳನ್ನು ನಿವಾರಿಸುತ್ತದೆ: ಮಾವಿನಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಯಂತಹ ಆಂಟಿಆಕ್ಸಿಡೆಂಟ್ ಅಂಶಗಳಿವೆ. ಇದು ಫ್ರಿ ರಾಡಿಕಲ್ಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಅಕಾಲಿಕ ವಯಸ್ಸಿನ ಲಕ್ಷಣಗಳನ್ನು ತಡೆಯುತ್ತದೆ ಎನ್ನಬಹುದು. ನಿರಂತರವಾಗಿ ಮಾವಿನಹಣ್ಣಿನ ಫೇಸ್ಪ್ಯಾಕ್ ಬಳಸುವುದರಿಂದ ಚರ್ಮದ ಮೇಲಿನ ನೆರಿಗೆ, ಸುಕ್ಕು ಇಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳುತ್ತಾರೆ.
ಚರ್ಮದ ಹೊಳಪು ಹಾಗೂ ಕಾಂತಿ ಹೆಚ್ಚಿಸುತ್ತದೆ: ಮಾವಿನಹಣ್ಣಿನ ತಿರುಳಿನಲ್ಲಿರುವ ಕಿಣ್ವಗಳು ಚರ್ಮವನ್ನು ಎಕ್ಸ್ಫೋಲಿಯೇಟ್ ಮಾಡುತ್ತದೆ. ಚರ್ಮದ ನಿರ್ಜೀವ ಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಹೀಗೆ ಮಾಡುವುದರಿಂದ ನೈಸರ್ಗಿಕವಾಗಿ ಕಾಂತಿ ಹಾಗೂ ಹೊಳಪು ಹೆಚ್ಚುತ್ತದೆ.
ಮೊಡವೆಗಳ ನಿವಾರಣೆ: ಮಾವು ಆಂಟಿಮೈಕ್ರೊಬಿಯಲ್ ಲಕ್ಷಣಗಳನ್ನು ಹೊಂದಿದೆ ಮತ್ತು ಇದು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾವಿನಹಣ್ಣು ಚರ್ಮದ ರಂಧ್ರಗಳನ್ನು ಶುದ್ಧೀಕರಿಸುತ್ತದೆ. ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ಸ್ಕಿನ್ ಟೋನ್ ಅನ್ನು ಹೆಚ್ಚಿಸುತ್ತದೆ: ಮಾವಿನಹಣ್ಣಿನಲ್ಲಿರುವ ನೈಸರ್ಗಿಕ ಆಸಿಡ್ ಅಂಶಗಳು ಚರ್ಮದ ಟೋನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕಪ್ಪುಕಲೆಗಳು ಹಾಗೂ ಕಳೆಗುಂದಿದ ಚರ್ಮದ ನಿವಾರಣೆಗೆ ಸಹಾಯ ಮಾಡುತ್ತದೆ.
ಆದರೆ ಕೆಲವರ ಚರ್ಮಕ್ಕೆ ಈ ಫೇಸ್ ಪ್ಯಾಕ್ ಒಗ್ಗದೇ ಇರಬಹುದು, ಒಮ್ಮೆ ಉಪಯೋಗಿಸಿ ಅದರಿಂದ ಆಗುವ ಆಗುಹೋಗುಗಳನ್ನು ಪರಿಶೀಲಿಸಿ ನಂತರ ಇನ್ನೊಮ್ಮೆ ಉಪಯೋಗಿಸುವುದು ಒಳ್ಳೆಯದು.