ಕಾಂಗ್ರೆಸ್ ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾದ 200 ಯೂನಿಟ್ ಉಚಿತ ವಿದ್ಯುತ್ ಗೃಹಜ್ಯೋತಿ ಯೋಜನೆಯ ಅನುಷ್ಠಾನಕ್ಕೆ ಸೋಮವಾರ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಗೃಹಜ್ಯೋತಿ ಯೋಜನೆಯನ್ನು ಷರತ್ತುಗಳೊಂದಿಗೆ ಸರಕಾರ ಜಾರಿಗೆ ತಂದಿದೆ. ಉಚಿತ ವಿದ್ಯುತ್ ಪೂರೈಸಲು ಪ್ರಸ್ತುತ ಚಾಲ್ತಿಯಲ್ಲಿರುವ ಕುಟೀರಜ್ಯೋತಿ, ಭಾಗ್ಯಜ್ಯೋತಿ ಮತ್ತು ಅಮೃತಜ್ಯೋತಿ ಯೋನಜೆಗಳ ಫಲಾನುಭವಿಗಳನ್ನೂ ಗೃಹ ಜ್ಯೋತಿ ಯೋಜನೆಯ ವ್ಯಾಪ್ತಿಗೆ ಸೇರಿಸಲಾಗಿದೆ.
ಗೃಹ ಜ್ಯೋತಿ ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್ಗಳವರೆಗಿನ ಬಳಕೆಯ ಮಿತಿಯಲ್ಲಿ ವಿದ್ಯುತ್ ನೀಡಲಾಗುತ್ತದೆ. ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ ಅಂದರೆ, ಆರ್ಥಿಕ ವರ್ಷ 2022-2023 ಬಳಕೆಯ ಆಧಾರದ ಅನ್ವಯ ಯೂನಿಟ್ಗಳ ಮೇಲೆ ಶೇಕಡ 10 ರಷ್ಟು ಹೆಚ್ಚಿನ ವಿದ್ಯುತ್ ಬಳಕೆಯ ಮಿತಿಯನ್ನು ನೀಡಲಾಗುತ್ತದೆ. ಅದಕ್ಕೆ ಅನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಿದವರಿಗಷ್ಷೆ ಗೃಹಜ್ಯೋತಿ:
ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಪ್ರತಿ ಫಲಾನುಭವಿಯು ತನ್ನ ಗ್ರಾಹಕ ಗುರುತಿನ ಸಂಖ್ಯೆ (ಕಸ್ಟಮರ್ ಐಡಿ) ಮತ್ತು ಖಾತೆಯ ಗುರುತಿನ ಸಂಖ್ಯೆ (ಅಕೌಂಟ್ ಐಡಿ) ಅನ್ನು ಆಧಾರ್ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು ಎಂದು ತಿಳಿಸಲಾಗಿದೆ.
ಒಂದು ಸ್ಥಾವರಕ್ಕೆ ಮಾತ್ರ ಉಚಿತ ವಿದ್ಯುತ್ ಯೋಜನೆ:
ಯೋಜನೆ ಅನುಷ್ಠಾನಕ್ಕೆ ಸೋಮವಾರ ಸರಕಾರ ಹೊರಡಿಸಿರುವ ಆದೇಶದಲ್ಲಿ ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದರೆ ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ, ಎಂದು ಸ್ಪಷ್ಟಪಡಿಸಲಾಗಿದೆ. ಸ್ಥಾವರ ಎಂದರೆ ಆರ್.ಆರ್. ನಂಬರ್ (ರೆವಿನ್ಯೂ ರೆಕಾರ್ಡ್ ನಂಬರ್). ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಒಂಟಿ ಮನೆಗಳು ಕಡಿಮೆ. ಬಹುಮಹಡಿ ಮನೆಗಳಲ್ಲಿ ಪ್ರತಿ ಮನೆಗೂ ಪ್ರತ್ಯೇಕ ಮೀಟರ್ ಇದ್ದರೂ ಎಲ್ಲವೂ ಕಟ್ಟಡದ ಮಾಲೀಕರ ಹೆಸರಿನಲ್ಲಿರುತ್ತವೆ. ಬಾಡಿಗೆದಾರರ ಹೆಸರಿಗೆ ವಿದ್ಯುತ್ ಮಾಪಕ ಮಂಜೂರಾಗಿರುವುದಿಲ್ಲ. ಹೀಗಾಗಿ ವಿಶೇಷವಾಗಿ ನಗರ ಮತ್ತು ಪಟ್ಟಣ ಪ್ರದೇಶಗಳ ಬಾಡಿಗೆ ಮನೆ ವಾಸಿಗಳು ಈ ಯೋಜನೆಯ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.
ಯೋಜನೆಯ ಪ್ರಮುಖ ಷರತ್ತುಗಳು:
* ಪ್ರತಿ ತಿಂಗಳೂ ಮೀಟರ್ ರೀಡಿಂಗ್ ನಡೆಯುತ್ತೆ. ನಿಗದಿತ ಉಚಿತ ವಿದ್ಯುತ್ಗಿಂತಾ ಹೆಚ್ಚು ಬಳಸಿದ್ದರೆ ಹೆಚ್ಚುವರಿ ಮೊತ್ತಕ್ಕೆ ಬಿಲ್ ನೀಡಲಾಗುತ್ತದೆ. ಉಚಿತ ವಿದ್ಯುತ್ ಪ್ರಮಾಣಕ್ಕಿಂತಾ ಕಡಿಮೆ ಬಳಸಿದ್ದರೆ ಬಿಲ್ ಇಲ್ಲ.
*ಗೃಹಲಕ್ಷ್ಮೀ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವದಿಲ್ಲ.
*ಮನೆಯ ವಿದ್ಯುತ್ ಸಂಪರ್ಕದ ಗ್ರಾಹಕ ಗುರುತಿನ ಸಂಖ್ಯೆ (ಕಸ್ಟಮರ್ ಐಡಿ) ಮತ್ತು ಖಾತೆಯ ಗುರುತಿನ ಸಂಖ್ಯೆ (ಅಕೌಂಟ್ ಐಡಿ) ಆಧಾರ್ಗೆ ಜೋಡಣೆ ಕಡ್ಡಾಯವಾಗಿ ಮಾಡಬೇಕು.
*ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತಾ ಹೆಚ್ಚು ವಿದ್ಯುತ್ ಸಂಪರ್ಕ ಇದ್ದರೆ ಒಂದಕ್ಕೆ ಮಾತ್ರ ಉಚಿತ ಯೋಜನೆ ಅನ್ವಯ.
*ಆರ್ಹ ಮೊತ್ತಕ್ಕಿಂತ ಕಡಿಮೆ ಪ್ರಮಾಣದ ವಿದ್ಯುತ್ ಬಳಕೆಯಾಗಿದ್ದರೆ ಗ್ರಾಹಕರಿಗೆ ಶೂನ್ಯ ಮೊತ್ತಕ್ಕೆ ಬಿಲ್ ನೀಡಮಾಗುವುದು.
*ಗೃಹಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮೀಟರ್ ಆಳವಡಿಕೆ ಮತ್ತು ಮೀಟರ್ ಓದುವುದು ಕಡ್ಡಾಯವಾಗಿದೆ.
*ಜೂನ್ 30 ವರೆಗೂ ಬಳಸಿದ ವಿದ್ಯುತ್ ಅನ್ನು ಸೇರಿಸಿಕೊಂಡು ಜುಲೈನಲ್ಲಿ ವಿತರಿಸಲಾಗುವ ಬಿಲ್ಲಿನ ಶುಲ್ಕದ ಬಾಕಿ ಮೊತ್ತವನ್ನು 3 ತಿಂಗಳೊಳಗೆ ಪಾವತಿಸಬೇಕು. ಬಾಕಿ ಮೊತ್ತವನ್ನು ನಿಗಧಿತ ಅವಧಿಯೊಳಗೆ ಪಾವತಿಸದಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು
ಗೃಹಜ್ಯೋತಿಗಾಗಿ 13 ಸಾವಿರ ಕೋಟಿ ವೆಚ್ಚ:
ರಾಜ್ಯದಲ್ಲಿ 2 ಕೋಟಿ 15 ಲಕ್ಷ ಆರ್.ಆರ್.ಸಂಖ್ಯೆಗಳಿವೆ. ಗೃಹ ಲಕ್ಷ್ಮಿ ಯೋಜನೆಯಡಿ ಸುಮಾರು 13 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ.