ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ಬಗ್ಗೆ ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದು, 12 ವರ್ಷ ಮೇಲ್ಪಟ್ಟ ಹಸುಗಳ ಹತ್ಯೆಗೆ ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಪಶು ಸಂಗೋಪನಾ ಸಚಿವ ವೆಂಕಟೇಶ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, 1964ರ ಕಾಯ್ದೆಯಂತೆ 12 ವರ್ಷ ಮೇಲ್ಪಟ್ಟ ಹಸುಗಳನ್ನು ವಧೆ ಮಾಡಬಹುದು. ಕೃಷಿ ಕೆಲಸಕ್ಕೆ ಬಾರದ ಹಸುಗಳ ವಧೆಗೆ ಅವಕಾಶವಿದೆ ಎಂದು ಸಚಿವರು ಹೇಳಬೇಕಿತ್ತು. ಆದರೆ ಅದನ್ನು ಸ್ಪಷ್ಟವಾಗಿ ಹೇಳಿಲ್ಲ ಎಂದರು.
ಇನ್ನು ಬಿಜೆಪಿ ಕಾರ್ಯಕರ್ತರು ತಮ್ಮ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ಸಾಧ್ಯತೆ ಇದೆ ಎಂದು ಪ್ರತಿಭಟನೆಗೆ ಮುಂದಾಗಿದೆ.
–
ಕೆರೇಬಿಯನ್ ರಾಷ್ಟ್ರ ಹೈಟಿಯಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಭಾರಿ ಮಳೆಯಿಂದಾಗಿ ಹೈಟಿಯಾದ್ಯಂತ ಹಲವಾರು ಭೂಕುಸಿತಗಳು ಸಂಭವಿಸಿವೆ. ಇದರಿಂದ 15 ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಘಟನೆಯಲ್ಲಿ ಸುಮಾರು 8ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ.
ದೇಶಾದ್ಯಂತ ಒಟ್ಟು ನೂರಾರು ಮನೆಗಳು ನಾಶವಾಗಿದ್ದು, ಸುಮಾರು 13,400 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಇಡೀ ಪ್ರದೇಶ ಕೆರೆ, ನದಿಗಳಂತಾಗಿವೆ, ಇದರಿಂದ ಸುಮಾರು 7,400 ಕುಟುಂಬಗಳು ದಿವಾಳಿಯಾಗಿವೆ. ಜನರ ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
–
ಬಿಜೆಪಿ ಸಂಸದ ಮತ್ತು ಕುಸ್ತಿ ಅಸೋಸಿಯೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಇದೀಗ ತಮ್ಮ ಕರ್ತವ್ಯಕ್ಕೆ ವಾಪಾಸ್ ಆಗಿದ್ದಾರೆ.
ಮುಂಚೂಣಿಯಲ್ಲಿ ನಿಂತು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರು ಕೆಲಸಕ್ಕೆ ಮರಳಿದ್ದಾರೆ.
ಆದರೆ ಈ ಪ್ರತಿಭಟನೆಯಿಂದ ನಾವು ಹಿಂದೆ ಸರಿದಿಲ್ಲ, ಸತ್ಯಾಗ್ರಹದ ಜೊತೆಗೆ ರೈಲ್ವೆಯಲ್ಲಿ ತಮ್ಮ ಕರ್ತವ್ಯ ನಿಭಾಯಿಸುತ್ತೇನೆ ಎಂದಿದ್ದಾರೆ ಸಾಕ್ಷಿ ಮಲ್ಲಿಕ್. ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ನೇತೃತ್ವದಲ್ಲಿ, ಎಲ್ಲಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದರು.
ಏಪ್ರಿಲ್ 23 ರಿಂದ ಜಂತರ್ ಮಂತರ್ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದರು. ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.
–
ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ಅಧಿವೇಶನ ಜುಲೈ 3ರಿಂದ ಆರಂಭವಾಗಲಿದೆ. ಇನ್ನು ಜುಲೈ 7 ರಂದು ಸಿಎಂ ಸಿದ್ದರಾಮಯ್ಯ ತಮ್ಮ ಮೊದಲ ಬಜೆಟ್ ಮಂಡಿಸಲಿದ್ದಾರೆ.
ಈ ಬಜೆಟ್ ಬಳಿಕ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತೇವೆ ಎಂದಿದ್ದಾರೆ. ಬಜೆಟ್ ಅಧಿವೇಶನದ ಬಗ್ಗೆ ಇನ್ನು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿಲ್ಲ. 3 ರಂದು ಬಜೆಟ್ ಅಧಿವೇಶನ ಪ್ರಾರಂಭ ಆಗಲಿದೆ. 1 ವಾರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ.
ಈ ವೇಳೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚೆ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.