ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಾಣವಾಗಿರುವ ನೂತನ ಸಂಸತ್ ಭವನವು ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿದೆ . ಇನ್ನು ಅದೇ ದಿನ ನೂತನ ಸಂಸತ್ ಭವನದಲ್ಲಿ ಲೋಕಸಭೆಯ ಸ್ಪೀಕರ್ ಆಸನದ ಸಮೀಪದಲ್ಲಿ ಐತಿಹಾಸಿಕ ಚಿನ್ನದ ರಾಜದಂಡ (ಸೆಂಗೋಲ್) ಅನ್ನು ಮೋದಿ ಸ್ಥಾಪಿಸಿಲಿದ್ದಾರೆ.
ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರ ಹಸ್ತಾಂತರವಾಗಿದ್ದನ್ನು ಗುರುತಿಸಲು ಈ ರಾಜದಂಡವನ್ನು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಹಸ್ತಾಂತರಿಸಲಾಗಿತ್ತು. ಈ ಐತಿಹಾಸಿಕ ಸೆಂಗೋಲ್ ಅನ್ನು ಅಲಹಾಬಾದ್ನ ಮ್ಯೂಸಿಯಂನಲ್ಲಿ ಇರಿಸಲಾಗಿತ್ತು.
ಸೆಂಗೋಲ್ ಎಂದರೆ ಏನು?
ರಾಜದಂಡವನ್ನು ಸೆಂಗೋಲ್ ಎಂದು ಕೂಡಾ ಕರೆಯಲಾಗುತ್ತದೆ. ಸೆಂಗೋಲ್ ಎಂದರೆ ತಮಿಳಿನ ‘ಸೆಮ್ಮಾಯಿ’ ಎಂಬ ಪದದಿಂದ ಉದ್ಭವಿಸಿದೆ. ಇದರ ಅರ್ಥ ‘ಸದಾಚಾರ’ ಎಂದು. ಸೆಂಗೋಲ್ನ ತುದಿಯಲ್ಲಿ ನಂದಿಯ ರಚನೆಯಿದೆ. ಇದು ನ್ಯಾಯದ ಸಂಕೇತ.
ರಾಜದಂಡದ ಇತಿಹಾಸ:
ಚೋಳರಂತಹ ತಮಿಳು ಸಾಮ್ರಾಟರು ಸಾಮಾನ್ಯವಾಗಿ ತಮ್ಮ ಕೈಯಲ್ಲಿ ರಾಜದಂಡ ಹಿಡಿದಿರುತ್ತಿದ್ದರು. ಹೊಸ ರಾಜನ ಕಿರೀಟಧಾರಣೆ ಬಳಿಕ ಅವರ ಪೂರ್ವಾಧಿಕಾರಿ ಅಥವಾ ರಾಜಗುರು ಪಟ್ಟಾಭಿಷೇಕದ ಸಂದರ್ಭದಲ್ಲಿ ರಾಜದಂಡವನ್ನು ಹಸ್ತಾಂತರ ಮಾಡುತ್ತಿದ್ದರು.
ತಂಜಾವೂರಿನ ಮಠದ ಉಪ ಮುಖ್ಯ ಅರ್ಚಕ ಮೌಂಟ್ ಬ್ಯಾಟನ್ ಅವರನ್ನು ಭೇಟಿಯಾಗಿ ಅವರ ಕೈಗೆ ಸೆಂಗೋಲ್ ಅನ್ನು ನೀಡಿದ್ದರು ನಂತರ ಅವರು ಅದನ್ನು 1947ರ ಆಗಸ್ಟ್ 14ರಂದು ರಾತ್ರಿ 11.45ರ ಸುಮಾರಿಗೆ ಅಂದರೆ ಭಾರತಕ್ಕೆ ಅಧಿಕೃತವಾಗಿ ಸ್ವಾತಂತ್ರ್ಯ ಸಿಗುವುದಕ್ಕೂ 15 ನಿಮಿಷಗಳ ಮುನ್ನ ನೆಹರೂ ಅವರಿಗೆ ಹಸ್ತಾಂತರಿಸಲಾಗಿತ್ತು. ಅದೇ ರಾಜದಂಡವನ್ನು ಹೊಸದಾಗಿ ನಿರ್ಮಿಸಿರುವ ಸಂಸತ್ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ಸ್ಪೀಕರ್ ಆಸನದ ಸಮೀಪದಲ್ಲಿ ಸ್ಥಾಪಿಸಿಲಿದ್ದಾರೆ.