ಕೇಂದ್ರ ಲೋಕಸಭಾ ಆಯೋಗದ 2022 ನೇ ಸಾಲಿನ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು ರಾಜ್ಯದಲ್ಲಿ 25ಕ್ಕೂ ಹೆಚ್ಚಿನ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ಬಾರಿ ಉತ್ತೀರ್ಣರಾದವರಲ್ಲಿ ಸಾಮಾನ್ಯ ವಿಭಾಗದಿಂದ 345 ಆರ್ಥಿಕ ದುರ್ಬಲ ವರ್ಗದಡಿ 99 ಒಬಿಸಿ ಯಿಂದ 23 ಪರಿಶಿಷ್ಟ ಜಾತಿಯಿಂದ 154 ಪರಿಶಿಷ್ಟ ಪಂಗಡದ 72 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ರಾಜ್ಯದ ರೈತ, ಶಿಕ್ಷಕ, ಕಂಡಕ್ಟರ್, ಅಂಗನವಾಡಿ ಶಿಕ್ಷಕಿಯ ಮಕ್ಕಳು ಸೇರಿದಂತೆ ಶ್ರಮಿಕ ವರ್ಗದವರ ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೇಶಕ್ಕೆ ಮಾದರಿಯಾಗಿದ್ದಾರೆ.
ಶ್ರಮಿಕರ ಮಕ್ಕಳು:
ಚೆಲುವರಾಜು:
ರಾಮನಗರ ಹಾರೋಹಳ್ಳಿ ತಾಲೂಕಿನ ದೊಡ್ಡಬಾವಿಗೆರೆ ಗ್ರಾಮದ ನಿವಾಸಿ ಚೆಲುವರಾಜು ಇವರು ಮೂರನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ. ರೈತನ ಮಗನಾಗಿರುವ ಚೆಲುವರಾಜು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಪಿಯುಸಿ ವರೆಗೂ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಇವರು ಬಡತನವನ್ನು ಮೆಟ್ಟಿನಿಂತು 238ನೇ ರಾಂಕ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಶೃತಿ ಯರಗಟ್ಟಿ:
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅರಭಾವಿ ಮಠ ಗ್ರಾಮದ ನಿವೃತ್ತ ಶಿಕ್ಷಕರ ಮಗಳು ಶ್ರುತಿ ಯರಗಟ್ಟಿ ಯುಪಿಎಸ್ಸಿ ಪರೀಕ್ಷೆಯಲ್ಲಿ 362ನೇ ರಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ. ಎಂ ಎಸ್ ಸಿ ಪದವಿ ಪಡೆದಿರುವ ಇವರು 6ನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಶ್ರುತಿ ಬಿಎಸ್ಸಿ ವ್ಯಾಸಂಗ ಮಾಡಿ ಏಳು ಚಿನ್ನದ ಪದಕ ಗಳಿಸಿದ್ದಾರೆ.
ಡಾ. ಬಾನು ಪ್ರಕಾಶ್:
ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದ ರೈತ ಜಯರಾಮೇಗೌಡ ಮಗ ಡಾಕ್ಟರ್ ಬಾನು ಪ್ರಕಾಶ್ ಮೂರನೇ ಪ್ರಯತ್ನದಲ್ಲಿ ನಾನು 488ನೇ ರಾಂಕ್ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ತಾಯಿ ಅಂಗನವಾಡಿ ಶಿಕ್ಷಕಿಯಾಗಿದ್ದು ಭಾನುಪ್ರಕಾಶ್ ವೃತ್ತಿಯಲ್ಲಿ ವೈದ್ಯರಾಗಿದ್ದರು.
ಸಿದ್ದಲಿಂಗಪ್ಪ ಕೆ ಪೂಜಾರಿ:
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಸಾರಿಗೆ ಬಸ್ ಚಾಲಕನ ಮಗ ಸಿದ್ದಲಿಂಗಪ್ಪ 589ನೇ ರಾಂಕ್ ನಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿರುವ ಸಿದ್ದಲಿಂಗಪ್ಪ ಬಡತನದ ನಡುವೆಯೂ ಸಾಧನೆಯನ್ನು ಮಾಡಿದ್ದಾರೆ.
ಮಹಿಳೆಯರದ್ದೇ ಮೇಲುಗೈ:
ದೇಶದಾದ್ಯಂತ 933 ಅಭ್ಯರ್ಥಿಗಳಲ್ಲಿ 322 ಮಹಿಳೆಯರು ಉತ್ತೀರ್ಣರಾಗಿದ್ದಾರೆ. ಹಾಗೆಯೇ ಆಲ್ ಇಂಡಿಯಾ ಟಾಪ್ 4 ಸ್ಥಾನಗಳು ಮಹಿಳೆಯರ ಪಾಲಾಗಿದೆ.