ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗುವ ಮೂಲಕ ಮೈಸೂರು ಜಿಲ್ಲೆಗೆ ನಾಲ್ಕನೇ ಬಾರಿಗೆ ಸಿಎಂ ಪಟ್ಟ ಒಲಿದಂತಾಗಿದೆ.
ಡಿ.ದೇವರಾಜು ಅರಸು 1972ರಲ್ಲಿ ಮುಖ್ಯಮಂತ್ರಿಯಾಗುವ ಮೂಲಕ ಮೊದಲ ಬಾರಿಗೆ ಮೈಸೂರು ಜಿಲ್ಲೆಗೆ ಸಿಎಂ ಸ್ಥಾನ ಒಲಿದಿತ್ತು ನಂತರ ಎರಡನೇ ಬಾರಿಗೆ 1978ರಲ್ಲಿ ಡಿ. ದೇವರಾಜು ಅರಸು ಮತ್ತೆ ಮುಖ್ಯಮಂತ್ರಿ ಹುದ್ದೆಯನ್ನು ಏರಿದ್ದರು. 2013ರಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪಟ್ಟವನ್ನು ಗಿಟ್ಟಿಸಿಕೊಂಡು ಮೂರನೇ ಬಾರಿಗೆ ಮೈಸೂರು ಜಿಲ್ಲೆಗೆ ಮುಖ್ಯಮಂತ್ರಿ ಭಾಗ್ಯವನ್ನು ಸಿಗುವಂತೆ ಮಾಡಿದ್ದರು. ಈ ಬಾರಿ ಪುನಃ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೂಲಕ ನಾಲ್ಕನೇ ಬಾರಿಗೆ ಮೈಸೂರು ಜಿಲ್ಲೆಗೆ ಸಿಎಂ ಗದ್ದುಗೆ ಒಲಿದಿದೆ.
ಡಿ.ದೇವರಾಜು ಅರಸು ಮುಖ್ಯಮಂತ್ರಿಯಾಗಿ:
ಡಿ.ದೇವರಾಜ ಅರಸು ಅವರು ಹುಣಸೂರು ಕ್ಷೇತ್ರದಿಂದ 1952, 1957, 1962, 1967, 1972 ಹಾಗೂ 1978 ಹೀಗೆ ಆರು ಬಾರಿ ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ. 1962ರಲ್ಲಿ ಅವಿರೋಧ ಆಯ್ಕೆಯ ಅವಕಾಶವು ಅವರಿಗೆ ಸಂದಿತ್ತು. 1972ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಕೂಡ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ ಆದರೆ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆದ್ದ ನಂತರ ದೇವರಾಜ ಅರಸು ಅವರೇ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ನಂತರ ಹುಣಸೂರಿನ ಶಾಸಕ ಡಿ.ಕರಿಯಪ್ಪಗೌಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇವರಾಜ ಅರಸು ಅವರಿಗೆ ಉಪಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ ಮಾಡಿಕೊಟ್ಟರು. ಉಪಚುನಾವಣೆಯಲ್ಲಿ ಅರಸು ಗೆದ್ದ ನಂತರ ಕರಿಯಪ್ಪ ಅವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. 1978ರಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಪೂರ್ಣಾವಧಿಯ ಆಡಳಿತ ನಡೆಸಿದ ಹೆಗ್ಗಳಿಕೆಯು ಅವರದಾಗಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ:
ಸಿದ್ದರಾಮಯ್ಯ ಉಪಚುನಾವಣೆ ಸೇರಿದಂತೆ ಚಾಮುಂಡೇಶ್ವರಿ ಕ್ಷೇತ್ರದಿಂದ ಐದು ಭಾರಿ 1983, 1985, 1994, 2004, 2006 ರಲ್ಲಿ ಸ್ಪರ್ಧಿಸಿದರೆ, 2008, 2013, 2023ರಲ್ಲಿ ವರುಣದಿಂದ ಮೂರು ಬಾರಿ ಹಾಗೂ 2018 ರಲ್ಲಿ ಬಾದಾಮಿಯಿಂದ ಒಂದು ಬಾರಿ ಸ್ಪರ್ಧಿಸಿದ್ದರು. ಒಟ್ಟಾರೆ ಈ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದರ ಮೂಲಕ 9ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. 2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಿದ್ದರಾಮಯ್ಯ ಅವರು ಪೂರ್ಣಾವಧಿಯಲ್ಲಿ ಆಡಳಿತ ನಡೆಸಿ ದೇವರಾಜ ಅರಸು ನಂತರ ಪೂರ್ಣಾವಧಿಯ ಆಡಳಿತ ನಡೆಸಿರುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಿಂದಾಗಿ ಸಿದ್ದರಾಮಯ್ಯ ಅವರಿಗೆ ಸಿಎಂ ಆಗುವ ಅವಕಾಶ ಕೈ ತಪ್ಪಿತ್ತು. 14 ತಿಂಗಳುಗಳ ನಂತರ ಸಮ್ಮಿಶ್ರ ಸರ್ಕಾರ ಪತನವಾಯಿತು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸಿಎಂ ಮಾತು ಮಾತು ಅಂದಿನಿಂದ ಕೇಳಿ ಬರಲು ಪ್ರಾರಂಭವಾಗಿತ್ತು.
ಎರಡು ಬಾರಿ ಡಿಸಿಎಂ, ಎಡರು ಬಾರಿ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕಳೆದ ಬಾರಿಯಂತೆಯೇ ಈ ಬಾರಿಯು ಪೂರ್ಣಾವಧಿಯ ಆಡಳಿತ ನಡೆಸಲಿದ್ದಾರಾ ಎಂದು ಕಾದು ನೋಡಬೇಕಿದೆ.