ನಾಯಕತ್ವದಿಂದ ಅಭಿವೃದ್ಧಿ ಕೆಲಸದಲ್ಲೂ ವಿಫಲ ನಳಿನ್ ಕುಮಾರ್ ಕಟೀಲು!
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದರ ಬದಲಾವಣೆ ಬಗ್ಗೆ ಜೋರಾಗಿ ಕೂಗು ಕೇಳಿ ಬಂದಿತ್ತು. ಭಾಜಪ ನಳಿನ್ ಕುಮಾರ್ಗೆ ಟಿಕೆಟ್ ಕೊಡಬಾರದು. ಬದಲಾಗಿ ಆಗ ಬೃಜೇಶ್ ಚೌಟ, ಸತ್ಯಜಿತ್ ಸುರತ್ಕಲ್ ಇತ್ಯಾದಿ ಮುಖಂಡರ ಹೆಸರು ಕೇಳಿ ಬರುತ್ತಿತ್ತು. ಈ ಲೋಕಸಭಾ ಕ್ಷೇತ್ರದಲ್ಲಿ ಭಾಜಪ ಅಭ್ಯರ್ಥಿ ಗೆಲ್ಲೋದು ನಿಶ್ಚಿತ. ಅಂದ್ರೆ ಯಾರು ಬಿಜೆಪಿ ಅಭ್ಯರ್ಥಿ ಆಗ್ತಾರೋ, ಅವ್ರೇ ಸಂಸದರು. ಆದರೂ ಭಾಜಪ ನಳಿನ್ ಕುಮಾರ್ ಕಟೀಲ್ ಅವ್ರಿಗೇ ಟಿಕೆಟ್ ನೀಡಿತ್ತು. ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಕಾರ್ಯಕರ್ತರೆಲ್ಲಾ ಒಂದಾದರು. ಪಕ್ಷಕ್ಕಾಗಿ, ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮವಹಿಸಿದರು. ನಿರೀಕ್ಷೆಯಂತೆ ನಳಿನ್ ಕುಮಾರ್ ಕಟೀಲು ಮೂರನೇ ಬಾರಿಗೆ ಸಂಸತ್ ಪ್ರವೇಶಿಸಿದರು.
ಬಹುಶಃ ಅವರಲ್ಲಿ ಅಹಂಕಾರದ ಬೀಜ ಬಿತ್ತಿದ್ದು ಇದೇ ಚುನಾವಣೆಯಲ್ಲಿ. ಏನೇ ಆಗಲಿ, ಪಕ್ಷ ಏನೇ ಮಾಡಲಿ. ಕಾರ್ಯಕರ್ತರು ನಮ್ಮ ಕೈ ಬಿಡಲ್ಲ ಎಂಬ ಸ್ಪಷ್ಟತೆ ಅವರಲ್ಲಿ ಮನೆಮಾಡಿತ್ತು. ಈ ವಿಷಯವನ್ನು ಅವರು ಹಲವು ಸಂದರ್ಶನಗಳಲ್ಲೂ ಉಲ್ಲೇಖಿಸಿದ್ದಾರೆ. “ಅವರ ಆಕ್ರೋಶ ಸೀಮಿತ. ಏನಾದರೂ ಸಮಾಜ ಘಾತಕ ಘಟನೆಗಳು ನಡೆದಾಗ ಅವ್ರು ಆಕ್ರೋಶವನ್ನು ಹೊರಗೆ ಹಾಕ್ತಾರೆ. ಆದ್ರೆ ಆಮೇಲೆ ಅವರೇ ಪೋಸ್ಟ್ ಗಳನ್ನು ಹಾಕ್ತಾರೆ. ಏನೇ ಆದರೂ ನಾವು ಬಿಜೆಪಿಯನ್ನು ಬಿಡುವುದಿಲ್ಲ” ಎಂದು.
ಇದೇ ಆತ್ಮವಿಶ್ವಾಸದಲ್ಲಿ ಭಾರತೀಯ ಜನತಾ ಪಕ್ಷ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಯೋಗಕ್ಕೆ ಇಳಿದಿತ್ತು. ನಳಿನ್ ಕುಮಾರ್ ಕಟೀಲು ಅವರ ಅಧ್ಯಕ್ಷತೆಯಲ್ಲಿ 150 ಸೀಟುಗಳ ಗುರಿಯಿಟ್ಟು ಹಲವು ಹೊಸ ಮುಖಗಳನ್ನು ಪರಿಚಯಿಸಿತ್ತು. ಆದರೆ ಅದು ಫಲ ಕೊಟ್ಟಿಲ್ಲ. ಹಿಂದುತ್ವದ ಫ್ಯಾಕ್ಟರಿ ಎನಿಸಿಕೊಂಡಿರುವ ಪುತ್ತೂರು ಕ್ಷೇತ್ರದಲ್ಲೂ ಭಾಜಪ ಹೀನಾಯವಾಗಿ ಸೋತಿತ್ತು. ಅದಕ್ಕೆ ಕಾರಣ “ನೊಂದ ಕಾರ್ಯಕರ್ತರು”!
ಭಾಜಪ ಘೋಷಿಸಿದ ಅಭ್ಯರ್ಥಿಯನ್ನು ವಿರೋಧಿಸಿ, ಕಾರ್ಯಕರ್ತರ ನಾಯಕ ಎಂದು ಬಿಂಬಿಸಿ, ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಕಣಕ್ಕಿಳಿಸಲಾಯಿತು. ಕಾಂಗ್ರೆಸ್ ಅಭ್ಯರ್ಥಿಗೆ ತಕ್ಕ ಪ್ರತಿಸ್ಪರ್ಧೆ ಒಡ್ಡಿ, ಅಲ್ಪ ಮತಗಳ ಅಂತರದಿಂದ ಅವರು ಸೋಲೊಪ್ಪಿದರು. ಇವರ ಆಕ್ರೋಶಕ್ಕೆ ಕಾರಣವಾದದ್ದು ಭಾಜಪ ಹಾಗೂ ಅದರ ರಾಜ್ಯಧ್ಯಕ್ಷ, ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಅವರು!
ಭಾಷಣದಲ್ಲಿ ಭಾರಿ ಮಾತನಾಡುವ, ಅಹಂಕಾರದಿಂದ ಬೀಗುವ ನಳಿನ್ ಕುಮಾರ್, ಸಂಸದರಾಗಿ ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ನೋಡಿದಾಗಲೂ ಸರಿಯಾದ ಪಟ್ಟಿ ಸಿಗುವುದಿಲ್ಲ.
ವಿವಾದಿತ ಪಂಪ್ವೆಲ್ ಫ್ಲೈಓವರ್ ನಿರ್ಮಾಣಕ್ಕೆ 10 ಕ್ಕೂ ಅಧಿಕ ವರ್ಷಗಳು ತಗುಲಿದ್ದವು. ಅದು ಬಿಟ್ಟರೆ ಬಂದರು ಹಾಗೂ ವಿಮಾನಯಾನ ಕ್ಷೇತ್ರದಲ್ಲಿ ಸ್ವಲ್ಪ ಕೆಲಸಗಳು ಬಿಟ್ಟರೆ ಹೇಳಿಕೊಳ್ಳುವ ದೊಡ್ಡ ಸಾಧನೆ ಏನೂ ಇಲ್ಲ ಇವರದ್ದು.
ಮಂಗಳೂರು ಒಂದು ವಿಶೇಷ ನಗರ. ರೈಲ್ವೇ, ವಿಮಾನ ಹಾಗೂ ಜಲ ಸಂಪರ್ಕ ಇರುವ ಕರ್ನಾಟಕ ರಾಜ್ಯದ ಏಕೈಕ ನಗರ ಮಂಗಳೂರು. ಸರಿಯಾದ ಯೋಜನೆಗಳು ಇದ್ದರೆ ಈ ನಗರವನ್ನು ಮತ್ತೊಂದು ಮುಂಬೈ ಮಾಡಬಹುದು. ರಾಜ್ಯ ರಾಜಧಾನಿ ಬೆಂಗಳೂರಿನ ಮೇಲೆ ಇರುವ ಹೊರೆಯನ್ನು ಕಡಿಮೆ ಮಾಡುವ ಶಕ್ತಿ ಮಂಗಳೂರಿಗಿದೆ. ಆರು ಪಥಗಳ ರಸ್ತೆ ಮಾಡೋ ಈ ದಿನಗಳಲ್ಲಿ ದ.ಕ ಜಿಲ್ಲೆಯ ಸಂಸದರು ಚತುಷ್ಪಥ ರಸ್ತೆ ಮಾಡಿದ್ದೇ ದೊಡ್ಡ ಸಾಧನೆ ಎಂಬಂತೆ ಮಾತನಾಡುತ್ತಾರೆ.
ನಾಯಕತ್ವ, ಕೆಲಸ, ಅಭಿವೃದ್ಧಿ ಹೀಗೆ ಎಲ್ಲಾ ರಂಗಗಳಲ್ಲೂ ವಿಫಲರಾಗಿರೋ ಸಂಸದರನ್ನು ಬದಲಾಯಿಸಬೇಕೆಂಬ ಕೂಗು ಈ ಬಾರಿಯೂ ಕೇಳಿ ಬರುತ್ತಿದೆ. ಅದಲ್ಲದೇ ಪುತ್ತೂರಿನಲ್ಲಿ ಅಲ್ಪ ಮತಗಳ ಅಂತರದಲ್ಲಿ ಸೋತ ಪುತ್ತಿಲರನ್ನೇ ಸಂಸದ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ದ.ಕ ಜಿಲ್ಲೆಯಿಂದ ಮನವಿಯೂ ಹೋಗಿದೆ. ಈ ಬಾರಿ ಭಾಜಪ ಅಭ್ಯರ್ಥಿಯ ಬದಲಾವಣೆ ಆಗೋದು ನಿಶ್ಚಿತ. ಆದರೆ ಹೊಸ ಅಭ್ಯರ್ಥಿ ಯಾರು ಎಂಬುದು ತಿಳಿಯಲು ಹಾಗೂ ಪುತ್ತಿಲರ ಸ್ಪರ್ಧೆಯ ಬಗ್ಗೆಯೂ ತಿಳಿಯಲು ಮುಂದಿನ ವರ್ಷದವರೆಗೆ ಕಾಯಲೇಬೇಕು.