ಅಸ್ಸಾಂ ನ ಲೇಡಿ ಸಿಂಗಂ ಎಂದೇ ಖ್ಯಾತರಾಗಿದ್ದ ಮಹಿಳಾ ಸಬ್ ಇನ್ಸ್ಪೆಕ್ಟರ್ ಜುನ್ಮೋನಿ ರಾಭಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಜುನ್ಮೋನಿ ರಾಭಾ ಅವರ ಸಾವು ನಿಗೂಢವಾಗಿದೆ ಎಂದು ಹೇಳಿರುವ ಅವರ ಕುಟುಂಬವು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದೆ. ನಾಗಾಂವ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊರಿಕೋಲಾಂಗ್ ಪೋಲೀಸ್ ಔಟ್ಪೋಸ್ಟ್ ಉಸ್ತುವಾರಿ ವಹಿಸಿದ್ದ ಜುನ್ಮೋನಿ ರಾಭಾ ಸೋಮವಾರ ತಡರಾತ್ರಿಗೆ ತಮ್ಮ ಖಾಸಗಿ ಕಾರ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಲಿಯಾಬೋರ್ ಉಪವಿಭಾಗದ ಜಖಲಬಂಧ ಪೊಲೀಸ್ ಠಾಣೆ ವ್ಯಾಪ್ತಿಯ ಸರುಭುಗಿಯಾ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ರಾತ್ರಿ 2.30ರ ಸುಮಾರಿಗೆ ಕಂಟೈನರ್ ವಾಹನ ಹಾಗೂ ರಾಭಾ ಅವರ ಕಾರು ಪರಸ್ಪರ ಡಿಕ್ಕಿಯಾಗಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ರಾಭಾ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಡಿಕ್ಕಿಯಾದ ಕಂಟೈನರ್ ಟ್ರಕ್ ಉತ್ತರಪ್ರದೇಶದಿಂದ ಬಂದಿತ್ತು ಎನ್ನಲಾಗಿದೆ, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ ನಾಗಾಂವ್ ಪೊಲೀಸ್ ಅಧೀಕ್ಷಕಿ ಲೀನಾ ಡೋಲ್ ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.