ನಟ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ತಮ್ಮನ್ನು ಇತ್ತಿಚಿನ ದಿನಗಳಲ್ಲಿ ತಮ್ಮನ್ನು ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಹೊಸಪೇಟೆಯ ಇಂಗಳಗಿ ಸಮೀಪದ ಅನ್ನಪೂರ್ಣೇಶ್ವರಿ ವಿದ್ಯಾಪೀಠ ವಸತಿಯುತ ಪ್ರೌಢಶಾಲೆಯನ್ನು ಶಿವರಾಜ್ ಕುಮಾರ್ ದಂಪತಿಯವರು ದತ್ತು ಪಡೆದುಕೊಳ್ಳಲು ಮುಂದಾಗಿದ್ದು ಜೋಗದ ದಿಗಂಬರ ರಾಜಭಾರತಿ ಸ್ವಾಮೀಜಿಯವರು 2012ರಲ್ಲಿ ಈ ಶಾಲೆಯನ್ನು ಸ್ಥಾಪಿಸಿದ್ದರು. ಆದರೆ ಇದೀಗ ಅನುದಾನಗಳ ಕೊರತೆಯಿಂದ ಶಾಲೆಯು ಮೂಲ ಸೌಕರ್ಯವಿಲ್ಲದೆ ಮುಚ್ಚುವ ಪರಿಸ್ಥಿತಿಗೆ ಬಂದಿದೆ. ಶಿವರಾಜ್ ಕುಮಾರ್ ಅವರು ವೇದ ಸಿನಿಮಾದ ಪ್ರಚಾರಕ್ಕೆ ಹೊಸಪೇಟೆಗೆ ಹೋದಾಗ ಈ ಶಾಲೆಯ ವಿಚಾರ ಅವರ ಗಮನಕ್ಕೆ ಬಂದಿದ್ದು, ಶಾಲೆಯ ದುಸ್ಥಿತಿಯನ್ನು ನೋಡಿ ಬೇಸರ ವ್ಯಕ್ತಪಡಿಸಿದ ಶಿವರಾಜ್ ಕುಮಾರ್ ದಂಪತಿಗಳು ಈ ಶಾಲೆಯನ್ನು ದತ್ತು ಪಡೆಯಲು ನಿರ್ಣಾಯ ಕೈಕೊಂಡರು.
ಗುರುವಾರ ಶಾಲೆಗೆ ಭೇಟಿ ನೀಡಿದ್ದ ಗೀತಾ ಶಿವರಾಜ್ ಕುಮಾರ್ ಶಾಲೆಯ ಪರಿಸ್ಥಿತಿ ತಿಳಿದುಕೊಂಡು, ಶಾಲೆಗೆ ಅಗತ್ಯವಾಗಿರುವ ಎಲ್ಲ ಸೌಕರ್ಯಗಳನ್ನು ಒದಗಿಸಿ ಸದ್ಯದಲ್ಲಿ ಇದರ ಅಭಿವೃದ್ಧಿ ಕಾರ್ಯ ಆರಂಭ ಮಾಡುವವೆಂದು ಭರವಸೆ ನೀಡಿದ್ದಾರೆ. ಶೀಘ್ರವೇ ಟ್ರಸ್ಟ್ ಒಂದನ್ನು ರಚಿಸಿ ಅದಕ್ಕೆ ಪದಾಧಿಕಾರಿಗಳನ್ನು ನೇಮಿಸಿ, ಶಾಲೆಯನ್ನು ಉತ್ತಮ ಸ್ಥಿತಿಗೆ ಕೊಂಡೋಗುತ್ತೇವೆ ಎಂದು ಹೇಳಿದರು. ಶಾಲೆಗೆ ಪ್ರಯೋಗಶಾಲೆ, ಗ್ರಂಥಾಲಯ, ಆಟದ ಮೈದಾನ, ಸಿಬ್ಬಂದಿ ನೇಮಕಾತಿ ಬಗ್ಗೆಯೂ ಚರ್ಚೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಶಿವರಾಜ್ ಕುಮಾರ್ ಅವರು ಸಹ ಶಾಲೆಗೆ ಭೇಟಿ ನೀಡುವ ಯೋಜನೆ ಇತ್ತು ಆದರೆ ಕೊನೆಯ ಕ್ಷಣದಲ್ಲಿ ಶಿವರಾಜ್ ಕುಮಾರ್ ಬರುವುದರಲ್ಲಿ ಬದಲಾವಣೆಯಾಯಿತು.
ಮೈಸೂರಿನಲ್ಲಿ ಶಕ್ತಿಧಾಮ ಬಾಲಕಿಯರ ವಸತಿಶಾಲೆಯನ್ನು ಶಿವರಾಜ್ ಕುಮಾರ್ ದಂಪತಿ ನಡೆಸುತ್ತಿದ್ದಾರೆ. ಪಾರ್ವತಮ್ಮ ರಾಜ್ಕುಮಾರ್ ಸ್ಥಾಪಿಸಿದ ವಸತಿ ಶಾಲೆ ಇದಾಗಿದ್ದು, ಪೋಷಕರಿಲ್ಲದ, ಕುಟುಂಬದಿಂದ ದೂರಾದ ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿ ಶಿಕ್ಷಣ ಒದಗಿಸುವ ಸಂಸ್ಥೆಯಾಗಿ ಅಂದು ಈ ಶಾಲೆ ಪ್ರಾರಂಭವಾಗಿತ್ತು. ಶಾಲೆಯಲ್ಲಿ ಈಗ ಹಲವು ಹೆಣ್ಣು ಮಕ್ಕಳು ಓದುತಿದ್ದು, ಶಾಲೆಯ ಮಕ್ಕಳೊಂದಿಗೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಸಂಪರ್ಕದಲ್ಲಿದ್ದಾರೆ.