ಮಡಿಕೇರಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೊಡಗು (Kodagu) ಜಿಲ್ಲೆಯ ಕೇರಳ ಗಡಿಯಲ್ಲಿ (Kerala Border) ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಮೇ 10 ರಂದು ಮತದಾನ ಹಿನ್ನೆಲೆಯಲ್ಲಿ ಕೊಡಗಿನ ನಕ್ಸಲ್ (Naxal) ಪೀಡಿತ ಬೂತ್ ಗಳಲ್ಲಿ ಬಿಗಿ ಭದ್ರತೆಯನ್ನು ನೀಡಲಾಗುತ್ತದೆ ಎಂದು ಕೊಡಗು ಎಸ್ಪಿ ರಾಜರಾಜನ್ ತಿಳಿಸಿದ್ದಾರೆ.
ಕೊಡಗಿನ ನಕ್ಸಲ್ ಪೀಡಿತ ಬೂತ್ ಗಳಾದ ಮಣ್ಟ್ರೂಟ್, ಕಡಮಕಲ್ಲು ಮತ್ತು ಒಣಚಲು ಬೂತ್ ಗಳಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ. ಜಿಲ್ಲೆಯ 12 ಅತಿ ಸೂಕ್ಷ್ಮ ಮತಗಟ್ಟೆಗಳು ಆಗಿದ್ದು ಈ ಬೂತ್ಗಳಿಗೆ ಈಗಾಗಲೇ ರಾಜ್ಯ ಪೊಲೀಸ್ ಇಲಾಖೆಯ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತಗಟ್ಟೆಗಳ ಬೂತ್ ಗಳಲ್ಲಿ ಅರೆಸೇನಾಪಡೆ, ಸಿಆರ್ಪಿಎಫ್ ಸಿಬ್ಬಂದಿ ನಿಯೋಜನೆ ನಿರ್ಧಾರ ಮಾಡಿದೆ.
ಮತ್ತೊಂದೆಡೆ ಕೂಂಬಿಂಗ್ ಮಾಡುತ್ತಿರುವ ಎಎನ್ಎಫ್ ತಂಡ ಅರಣ್ಯ ಅಂಚಿನಲ್ಲಿ ನಿರಂತರ ನಿಗಾ ಇರಿಸಿದ್ದಾರೆ. ಜನಸಾಮಾನ್ಯರು ನಿರ್ಭೀತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಕೊಡಗು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಅಷ್ಟೇ ಅಲ್ಲದೇ ಕೊಡಗಿನ ಬಿರುನಾಣಿ, ಪೂಕೊಳ, ಮಾಕುಟ್ಟ ಮೊದಲಾದ ಗಡಿಭಾಗದ ಪ್ರದೇಶಗಳ ಜೊತೆಗೆ ಕೇರಳದ ಭಾಗಗಳಲ್ಲೂ ನಿರಂತರ ನಿಗಾ ಇರಿಸಿದ್ದಾರೆ.
ಏಪ್ರಿಲ್ 27ರಂದು ಕೇರಳದ ವಯನಾಡು ಜಿಲ್ಲೆಯ ತಲಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ನಕ್ಸಲರು ಕಾಣಿಸಿಕೊಂಡಿದ್ದರು. ಇವರಲ್ಲಿ ಕರ್ನಾಟಕದ ನಕ್ಸಲ್ ವಿಕ್ರಂ ಗೌಡ ಕೂಡಾ ಇದ್ದ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಇಲ್ಲಿನ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಎಚ್ಚೆತ್ತಿದ್ದು, ಗಡಿಭಾಗದಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ಕೇರಳದ ಕಾಡಿನಂಚಿನಲ್ಲಿರುವ ಅನೇಕರಿಗೆ ನಕ್ಸಲರ ಮೇಲೆ ಅನುಕಂಪ ಇದೆ. ನಕ್ಸಲರ ಚಟುವಟಿಕೆಗಳು ಹೆಚ್ಚಿದ್ದರೂ, ಮಾಹಿತಿ ಇದ್ದರೂ ಇವರು ಪೊಲೀಸರಿಗೆ ಮಾಹಿತಿ ನೀಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಕೊಡಗು-ಕೇರಳ ಗಡಿಭಾಗದ ಕುಟ್ಟ ಮತ್ತು ಆರ್ಜಿ ಗ್ರಾಮಗಳಲ್ಲಿ ನಕ್ಸಲ್ ನಿಗ್ರಹ ಪಡೆಯ 2 ಶಿಬಿರಗಳು ಇವೆ. ಇಲ್ಲಿ 60ಕ್ಕೂ ಅಧಿಕ ಮಂದಿ ಪೊಲೀಸರು ಸಕ್ರಿಯರಾಗಿದ್ದು, ನಿತ್ಯವೂ ಕಾಡಿನೊಳಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಡಂಚಿನ ಜನರು ಮುಕ್ತವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಕೊಡಗು ಎಸ್ಪಿ ರಾಜರಾಜನ್ ತಿಳಿಸಿದ್ದಾರೆ.