ಮೇ 10 ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಿಚ್ಚ ಸುದೀಪ್ ಅವರ ಬೆಂಬಲ ಸೂಚಿಸಿದ್ದು, ರಾಜಕೀಯ ಮತ್ತು ಸ್ಯಾಂಡಲ್ ವುಡ್ ನಡುವಿನ ಕಹಿ-ಸಿಹಿ ಸಂಬಂಧವು ಮತ್ತೆ ಚರ್ಚೆಗೆ ಗ್ರಾಸವಾಗಿದೆ. ನೆರೆಯ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಸಿನೆಮಾ ಮತ್ತು ರಾಜಕೀಯವು ನಿಕಟ ಸಂಬಂಧವನ್ನು ಹೊಂದಿದೆ. ತಮಿಳುನಾಡಿನಲ್ಲಿ ಎಂ.ಜಿ.ರಾಮಚಂದ್ರನ್ ಮತ್ತು ಆಂಧ್ರಪ್ರದೇಶದಲ್ಲಿ ಎನ್.ಟಿ.ರಾಮರಾವ್ ಅವರಂತಹ ನಟರು ಮುಖ್ಯಮಂತ್ರಿಗಳಾಗಿದ್ದರು ಮತ್ತು ಜನರು ನೆಚ್ಚಿನ ತಾರೆಯರನ್ನು ರಾಜ್ಯ ನಾಯಕರಾಗಿ ಒಪ್ಪಿಕೊಂಡರು.
ಇಂದಿಗೂ, ಅಲ್ಲಿನ ಪ್ರತಿಯೊಬ್ಬ ಸಿನಿಮಾ ನಟ ನಟಿಯರು ರಾಜಕೀಯ ಪಕ್ಷಗಳತ್ತ ಒಲವನ್ನು ಹೊಂದಿದ್ದಾರೆ. ಆದರೆ ಕರ್ನಾಟಕದಲ್ಲಿ ರಾಜಕೀಯ ಮತ್ತು ಸಿನಿಮಾರಂಗವು ಎಂದಿಗೂ ಭೇಟಿಯಾಗದ ಸಮಾನಾಂತರ ರೇಖೆಗಳಂತೆ ಇದೆ. ಸಹಜವಾಗಿ ಸಿನಿಮಾರಂಗದವರು ರಾಜಕೀಯ ವ್ಯಕ್ತಿಗಳೊಂದಿಗೆ ಸ್ನೇಹ ಇರಲಿ ವಿವಾದವೇ ಇರಲಿ ಮಿತಿಯನ್ನೂ ಮೀರದಂತೆ ನೋಡಿಕೊಳ್ಳುತ್ತಾರೆ.
ಇತ್ತೀಚೆಗೆ, ಕಿಚ್ಚ ಸುದೀಪ್ ಅವರು ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತಿರುವುದನ್ನು ಸಿನಿಮಾರಂಗದ ಒಳಗೆ ಮತ್ತು ಹೊರಗೆ ಅನೇಕರನ್ನು ಕೆರಳಿಸಿದೆ. ಆದರೆ ಕನ್ನಡ ಚಲನಚಿತ್ರ ತಾರೆಯರು ರಾಜಕೀಯ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡರು ಕೂಡ ಸಕ್ರಿಯವಾಗಿ ರಾಜಕೀಯವನ್ನು ಮುಂದುವರಿಸಲು ಆಸಕ್ತಿಯನ್ನು ತೋರಿಸುವುದಿಲ್ಲ. ರಾಜಕೀಯದಲ್ಲಿ ಬೆರಳೆಣಿಕೆಯ ಸಿನಿಮಾ ನಟರು ಇದ್ದರು ಕೂಡ ಸಕ್ರೀಯವಾಗಿ ಎರಡು ರಂಗದಲ್ಲೂ ಗುರುತಿಸಿಕೊಂಡಿಲ್ಲ.
ಗೋಕಾಕ್ ಚಳುವಳಿ
ಕನ್ನಡ ನಟರು ಯಾವಾಗಲೂ ಭಾಷಾಭಿಮಾನವನ್ನು ಪ್ರದರ್ಶಿಸಿದ್ದಾರೆ. ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಬೆದರಿಕೆ ಬಂದಾಗಲೆಲ್ಲಾ ಅವರು ಯಾವಾಗಲೂ ಧ್ವನಿ ಎತ್ತಿದ್ದಾರೆ. ಸ್ಯಾಂಡಲ್ವುಡ್ ನಟರು ಕರ್ನಾಟಕದೊಂದಿಗೆ ಬೆಂಬಲಕ್ಕೆ ನಿಂತ ಅನೇಕ ಉದಾಹರಣೆಗಳಿವೆ. ೧೯೮೦ ರಲ್ಲಿ ವರನಟ ಡಾ.ರಾಜ್ ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಸೇರಿದಂತೆ ಕನ್ನಡ ಚಲನಚಿತ್ರೋದ್ಯಮದ ನಟರು ಗೋಕಾಕ್ ಚಳವಳಿಯಲ್ಲಿ ತೀವ್ರ ಆಸಕ್ತಿ ವಹಿಸಿದರು. ಆದರೆ ನಂತರ ಅವರು ಸಕ್ರಿಯ ರಾಜಕೀಯದಿಂದ ಅಂತರವನ್ನು ಕಾಯ್ದುಕೊಂಡರು.
ಇದಲ್ಲದೆ, ಅನೇಕ ರಾಜಕೀಯ ಪಕ್ಷಗಳು ಡಾ.ರಾಜ್ ಕುಮಾರ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನು ನೀಡಿದವು ಆದರೆ ಅವರು ನಯವಾಗಿ ನಿರಾಕರಿಸಿದರು. ಇಲ್ಲಿಯವರೆಗೆ, ಅವರ ಕುಟುಂಬ ಸದಸ್ಯರು ರಾಜಕೀಯದಲ್ಲಿ ಯಾವುದೇ ಆಸಕ್ತಿ ತೋರಿಸಿಲ್ಲ. ಕುಟುಂಬದ ಸೊಸೆ ಗೀತಾ ಶಿವರಾಜ್ ಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರಿಯಾಗಿದ್ದರೂ, ಕೂಡ ಕುಟುಂಬವು ಸಕ್ರಿಯ ರಾಜಕೀಯದಿಂದ ದೂರ ಉಳಿದಿದೆ.
ಇದಕ್ಕೆ ಅಪವಾದವೆಂಬಂತೆ ಅನಂತನಾಗ್, ಅಂಬರೀಶ್ ಮತ್ತು ಉಮಾಶ್ರೀ ಅವರು ಸಚಿವರಾದರು. ಆದಾಗ್ಯೂ, ಉಮಾಶ್ರೀ ಅವರನ್ನು ಹೊರತುಪಡಿಸಿ, ಉಳಿದ ಇಬ್ಬರು ನಂತರ ಅಜ್ಞಾತ ಕಾರಣಗಳಿಂದಾಗಿ ರಾಜಕೀಯದಿಂದ ದೂರ ಉಳಿದರು.
ಕನ್ನಡ ಚಿತ್ರರಂಗವು ರಾಜಕೀಯದಿಂದ ಏಕೆ ಅಂತರ ಕಾಯ್ದುಕೊಂಡಿದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ, ಆದರೆ ವಿವಿಧ ಪಕ್ಷಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಹೊಂದಿವೆ ಮತ್ತು ಬಹುಶಃ ಅವರು ಪಕ್ಷದ ಆಧಾರದ ಮೇಲೆ ತಮ್ಮ ಅಭಿಮಾನಿ ಬಳಗವನ್ನು ವಿಭಜಿಸಲು ಬಯಸುವುದಿಲ್ಲ ಎಂದು ತೋರುತ್ತದೆ