ವಯಸ್ಸಿಗೆ ಅನುಗುಣವಾಗಿ ದೇಹದ ಅಂಗ ರಚನೆ, ಬೆಳವಣಿಗೆ ಮತ್ತು ಶರೀರ ಶಾಸ್ತ್ರದ ಬಗ್ಗೆ ಅರಿವು ಮೂಡಿಸಿ ಅದಕ್ಕೆ ಅವಶ್ಯವಾದ ಜ್ಞಾನವನ್ನು ನೀಡುವ ಶಿಕ್ಷಣಕ್ಕೆ ಲೈಂಗಿಕ ಶಿಕ್ಷಣ ಎನ್ನಬಹುದು.
ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ತುಂಬಾ ದೊಡ್ಡ ಮಟ್ಟದಲ್ಲಿ ಆತಂಕ ಉಂಟು ಮಾಡುತ್ತಿವೆ. ಜಗತ್ತನ್ನ ಅರಿಯದ ಎಷ್ಟೋ ಕಂದಮ್ಮಗಳು ಕಾಮುಕನ ಕೈಗೆ ಸಿಕ್ಕಿ ತೊಂದರೆಗೆ ಒಳಪಡುವ ಪ್ರಕರಣಗಳು ನಮ್ಮ ಕಣ್ಣು ಮುಂದೆ ನಡೆಯುತ್ತಿರುತ್ತವೆ. ಹೀಗಿರುವಾಗ ತಾಯಿಯಾದವಳು ಶಾಲೆಗೆ ಮಗುವನ್ನು ಕಳಿಸುವ ಮುಂಚೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಗಳ ಬಗ್ಗೆ ಹೆಣ್ಣು ಮಗುವಿಗೆ ಹೇಳಿ ಕೊಟ್ಟಿರಬೇಕು ಮತ್ತೆ ಅದನ್ನು ಶಾಲೆಯಲ್ಲಿ ಶಿಕ್ಷಕರು ವಿವರವಾಗಿ ಮಕ್ಕಳಿಗೆ ಅದರ ಬಗ್ಗೆ ಆಗಾಗ ಮಾಹಿತಿ ನೀಡುತ್ತಾ ಬಂದರೆ ಯಾವ ಹೆಣ್ಣು ಮಗುವಿಗೂ ಅನ್ಯಾಯವಾಗಲು ಸಾಧ್ಯವಿಲ್ಲ.
ಮಾನವನ ಮನಸ್ಸಿನಲ್ಲಿ ಉದ್ಭವಿಸುವ ವಯೋ ಸಹಜ ಲೈಂಗಿಕ ವಾಂಛೆ ಮತ್ತು ಪ್ರವೃತ್ತಿಯ ಬಗ್ಗೆ ಅರಿವು ಮೂಡಿಸುವವರು ದೇಹ ರಚನೆಯಲ್ಲಿನ ವಿವಿಧ ವ್ಯತ್ಯಾಸಗಳು ಹಾಗೂ ಕೀಳರಿಮೆಯನ್ನು ತೆಗೆದು ಹಾಕಿ ತಮ್ಮ ದೇಹ ರಚನೆಯ ಬಗ್ಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದಕ್ಕೆ ಲೈಂಗಿಕ ಶಿಕ್ಷಣ ಅವಶ್ಯ. ಲೈಂಗಿಕ ಅಜ್ಞಾನವನ್ನು ಒಂದು ಸಾಮಾಜಿಕ ಪಿಡುಗು ಎಂದು ಪರಿಗಣಿಸಬಹುದು. ಇದನ್ನು ತಡೆಯಲು ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಇತರ ವಿಷಯಗಳ ಜ್ಞಾನ ಒದಗಿಸುವ ಜೊತೆ ಜೊತೆಗೆ ಲೈಂಗಿಕ ಶಿಕ್ಷಣವನ್ನು ನೀಡಬೇಕು. ಇದರ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದು ಹಾಗೂ ಪಾಲಕರದ್ದು ಆಗಿರುತ್ತದೆ. ಇದರಿಂದ ಮಕ್ಕಳಲ್ಲಿರುವ ಕುತೂಹಲ ಕಡಿಮೆಯಾಗಿ ಅತ್ಯಾಚಾರ, ಕೊಲೆ ಇಂತಹ ದುಷ್ಟ ಕೃತ್ಯಗಳು ಕಡಿಮೆಯಾಗಬಹುದು.
ವಿದ್ಯಾರ್ಥಿಗಳಿಗೆ ಲೈಂಗಿಕ ಆರೋಗ್ಯದ ಜ್ಞಾನವನ್ನು ನೀಡುವಲ್ಲಿ ಶಾಲೆಗಳ ಪಾತ್ರ ಮಹತ್ವದ್ದಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಅವರಿಗೆ ಸಂಭವಿಸಬಹುದಾದ ಅಪಾಯದಿಂದ ದೂರವಿರಬಹುದು.
ವಯಸ್ಸಿಗೆ ಅನುಗುಣವಾಗಿ ದೈಹಿಕ, ಮಾನಸಿಕ ಆರೋಗ್ಯದ ವಿಚಾರವಾಗಿ ತಮ್ಮ ಬಗ್ಗೆ ಕಾಳಜಿ ವಹಿಸಿಕೊಂಡು ಸಾಮಾಜಿಕವಾಗಿ ಜವಾಬ್ದಾರಿಯುತ ವ್ಯಕ್ತಿಯಾಗಲು ವಿದ್ಯಾರ್ಥಿ ಜೀವನದಲ್ಲಿ ಲೈಂಗಿಕ ಶಿಕ್ಷಣ ಅತ್ಯಂತ ಸಹಕಾರಿಯಾಗಿರುತ್ತದೆ.
ಲೈಂಗಿಕವಾಗಿ ಹರಡುವ ರೋಗಗಳು ಹದಿಹರೆಯದಲ್ಲಿ ಅನವಶ್ಯವಾಗಿ ನಡೆಯುವ ಗರ್ಭಧಾರಣೆ ಮತ್ತು ಅದರಿಂದಾಗುವ ತೊಡಕುಗಳನ್ನು ಲೈಂಗಿಕ ಶಿಕ್ಷಣ ತಡೆಯುತ್ತದೆ. ಲೈಂಗಿಕ ಶಿಕ್ಷಣವು ವಿದ್ಯಾರ್ಥಿ, ಶಿಕ್ಷಕರು ಮತ್ತು ಶಾಲೆಯ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ ಅಲ್ಲದೇ ಶಾಲೆಯಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತದೆ.